ಬೆಂಗಳೂರು, ಜ, 09 (DaijiworldNews/AN): ಕಳೆದ ಬಾರಿ ಬಿಸಿಸಿಐ ಸಂಪೂರ್ಣ ಸುರಕ್ಷತೆಯೊಂದಿಗೆ ಭಾರತದಲ್ಲೇ ಟೂರ್ನಿ ಆಯೋಜಿಸಿದ್ದು, ಮುಕ್ತಾಯದ ವೇಳೆ ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿತ್ತು.
ಈ ಬಾರಿ ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೇಲೂ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಹಾಗೂ ಮುಂಬರುವ ತಿಂಗಳಿನಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಬಿಸಿಸಿಐ ಹೊಂದಿದ್ದು, ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ ಟೂರ್ನಿಯನ್ನು ವಿದೇಶದಲ್ಲಿ ನಡೆಸಲು ಬಿಸಿಸಿಐ ಚರ್ಚೆ ನಡೆಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಭಾರತದಲ್ಲೇ ಈ ಬಾರಿ ಟೂರ್ನಿಯನ್ನು ಆಯೋಜಿಸುವುದಾಗಿ ನಿರ್ಧರಿಸಿತ್ತು ಆದರೆ ಪ್ರಸ್ತುತದ ಪರಿಸ್ಥಿತಿಯನ್ನು ಗಮನಿಸಿದರೆ ದೇಶದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬರುವುದು ಅನುಮಾನ ಎನ್ನಲಾಗುತ್ತಿದ್ದು, ವಿದೇಶದಲ್ಲಿ ಐಪಿಎಲ್ನ್ನು ಆಯೋಜಿಸುವ ಕುರಿತು ಚರ್ಚೆ ನಡೆಸಿ ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ದದ ಸರಣಿಯನ್ನು ಆಯೋಜಿಸಬೇಕಾಗಿದ್ದು, ಇದರ ಬೆನ್ನಲ್ಲೇ ಶ್ರೀಲಂಕಾ ವಿರುದ್ದ ಕೂಡ ಟೀಮ್ ಇಂಡಿಯಾ ಸರಣಿ ಆಡಬೇಕಿದೆ. ಈ ಎರಡು ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾದರೆ ಭಾರತದಲ್ಲೇ ಟೂರ್ನಿಯನ್ನು ನಡೆಸಬಹುದು ಎಂದು ತಿಳಿದು ಬಂದಿದೆ.