ನವದೆಹಲಿ, ಫೆ 20 (DaijiworldNews/MS): ಮುಂದಿನ ವರ್ಷ ಭಾರತವು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಯ ಸಭೆಗೆ ಆತಿಥ್ಯ ವಹಿಸಲಿದೆ. ಇದು ಮುಂಬರುವ ದಿನದಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ನಂಥ ದೊಡ್ಡ ಕ್ರೀಡಾಕೂಟ ಆಯೋಜಿಸಲು ರಹದಾರಿಯಾಗಿದೆ.
1983ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಸಭೆ ನಡೆಯಲಿದೆ. ಮುಂಬೈನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದೆ. ೪೫ ಗೌರವಾನ್ವಿತ ಸದಸ್ಯರು ಸೇರಿದಂತೆ ಮತದಾನದ ಹಕ್ಕು ಹೊಂದಿರುವ ೧೦೧ ಸದಸ್ಯರೊಂದಿಗೆ ವಾರ್ಷಿಕ ಮಹಾಸಭೆಯು ನಡೆಯಲಿದೆ. ಬೀಜಿಂಗ್ನಲ್ಲಿ ಈಚೆಗೆ ಸಭೆ ನಡೆದಿತ್ತು. 2023ರ ಸಮ್ಮೇಳನಕ್ಕಾಗಿ ವಿಶ್ವದ ವಿವಿಧ ನಗರಗಳು ಬಿಡ್ ಸಲ್ಲಿಸಿದ್ದವು. ಅದರಲ್ಲಿ ಮುಂಬೈಗೆ 76 ಮತಗಳ ಪೈಕಿ 75 ಲಭಿಸಿದವು.
ಭಾರತಕ್ಕೆ ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿರುವ ಯೂತ್ ಒಲಿಂಪಿಕ್ ಗೇಮ್ಸ್ , ಒಲಿಂಪಿಕ್ ಕ್ರೀಡಾಕೂಟ ಆಯೋಜನೆಗೆ ಈ ಆಧಿವೇಶನ ಸಹಕಾರಿಯಾಗಿದ್ದು ಇಂಥ ಸಮಯಕ್ಕೆ ೪೦ ವರ್ಷ ಕಾಯಬೇಕಾಯಿತು. ಇದೊಂದು ಹಮ್ಮೆಯ ಕ್ಷಣವಾಗಿದೆ. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಮಹತ್ವದ ದಿನ ಇದು. ವಿಶ್ವದಲ್ಲಿಯೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ನಮ್ಮದು. ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಲು ಮತ್ತು ಒಲಿಂಪಿಕ್ ಕ್ರೀಡೆಗಳತ್ತ ಯುವಕರನ್ನು ಆಕರ್ಷಿಸಿ ಪ್ರೋತ್ಸಾಹ ನೀಡಲು ಇದರಿಂದ ಸಾಧ್ಯವಾಗಲಿದೆ. ಐಒಸಿಗೆ ಧನ್ಯವಾದಗಳುಎಂದು ಐಒಸಿ ನ ಸದಸ್ಯೆಯಾಗಿರುವ ನೀತಾ ಅಂಬಾನಿ ತಿಳಿಸಿದ್ದಾರೆ
ಐಒಸಿಯ ಸದಸ್ಯೆಯಾಗಿರುವ ಭಾರತದ ನೀತಾ ಅಂಬಾನಿ, ಭಾರತ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಡಾ. ನರಿಂದರ್ ಬಾತ್ರಾ, ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ ಬಿಂದ್ರಾ ಅವರಿದ್ದ ನಿಯೋಗವು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿತ್ತು.