ತಮಿಳುನಾಡು, 21 (DaijiworldNews/HR): ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಆರ್. ಪ್ರಗ್ನಾನಂದ(16) ಅವರು ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸೆನ್ಗೆ ಸೋಲುಣಿಸಿದ್ದಾರೆ.
ಆನ್ಲೈನ್ ಮೂಲಕ ಪ್ರಗ್ನಾನಂದ ಆಟವಾಡಿ ವಿಶ್ವ ಚಾಂಪಿಯನ್ ನನ್ನು ಸೋಲಿಸಿ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಭಾರತ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಈ ಸಾಧನೆಯನ್ನು ಮಾಡಿದ್ದು, ಇದೀಗ ಪ್ರಗ್ನಾನಂದ ಸಾಧನೆ ಮಾಡಿದ್ದಾರೆ.
ಇನ್ನು ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಗ್ನಾನಂದ ಆಗಸ್ಟ್ 10, 2005ರಲ್ಲಿ ಜನಿಸಿದ್ದು, 2016 ರಲ್ಲಿ 10 ವರ್ಷಗಳು, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದಾಗಿದ್ದು, ಬಳಿಕ 2018ರಲ್ಲಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. 2019 ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್ನಲ್ಲೂ ಗೆಲುವು ಸಾಧಿಸಿದ್ದು, ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್ ಶಿಪ್ ಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.