ನವದೆಹಲಿ, ಫೆ. 23 (DaijiworldNews/SM): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ ನೇಮಕಗೊಂಡಿದ್ದಾರೆ.
ಗುರುವಾರದಂದು ಲಖನೌದಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಟಿ20 ಪಂದ್ಯದಲ್ಲಿ ಅಜಿತ್ ಅಗರ್ಕರ್ ಟಿವಿಗೆ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆ ಬಳಿಕ ಶುಕ್ರವಾರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಡೆಲ್ಲಿ ತಂಡದ ಭಾಗವಾಗಿ ಕಾರ್ಯನಿರ್ವಹಿಸುವುದು ನನಗೆ ಸಂತೋಷವನ್ನುಂಟು ಮಾಡುತ್ತಿದೆ. ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ ಹಾಗೂ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಕಾರ್ಯನಿರ್ವಹಿಸುವುದು ವಿಭಿನ್ನ ಅನುಭವ ನೀಡಲಿದೆ ಎಂದು ಅಜಿತ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
2023ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವರೆಗೆ ಅಜಿತ್ ಅಗರ್ಕರ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸುವಂತೆ ತಂಡದ ಹಿರಿಯ ಆಟಗಾರರೊಬ್ಬರು ಬಿಸಿಸಿಐಗೆ ಶಿಫಾರಸ್ಸು ಮಾಡಿರುವುದನ್ನು ಕೂಡಾ ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಅಜಿತ್ ಅಗರ್ಕರ್ ಅವರು 1998ರಿಂದ 2007ರವರೆಗೆ ಭಾರತ ಪರ 28 ಟೆಸ್ಟ್ ನಲ್ಲಿ 58 ವಿಕೆಟ್, 191 ಏಕದಿನ ಪಂದ್ಯದಲ್ಲಿ 288 ವಿಕೆಟ್ ಮತ್ತು 4 ಟಿ20 ಪಂದ್ಯದಲ್ಲಿ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ.