ಚಂಡೀಗಢ, ಮಾ.17 (DaijiworldNews/SM): ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ರಾಜಕೀಯದತ್ತ ಮುಖಮಾಡಿದ ಬಳಿಕ ಇದೀಗ ರಾಜ್ಯಸಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದನ್ನು ಅಲ್ಲಗಳೆದ ಬಳಿಕ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದರು. ಇದೀಗ ಎ ಎ ಪಿ ಪಕ್ಷದಿಂದ ಅವರು ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಪಂಜಾಬ್ ರಾಜ್ಯದ ಎಎಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಹರ್ಭಜನ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ.
2022ರಲ್ಲಿ ಆಮ್ ಆದ್ಮಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ 92 ಸ್ಥಾನ ಗೆದ್ದು ಅಧಿಕಾರ ಸ್ಥಾಪಿಸಿದೆ. ಭಗವಂತ್ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ 18, ಶಿರೋಮಣಿ ಅಕಾಲಿ ದಳ 3, ಬಿಜೆಪಿ 2, ಬಿಎಸ್ ಪಿ 1, ಇತರೆ 1 ಸ್ಥಾನ ಗಳಿಸಿದ್ದಾರೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರವು ಹರ್ಭಜನ್ ಸಿಂಗ್ ಅವರಿಗೆ ನೂತನ ಕ್ರೀಡಾ ವಿಶ್ವವಿದ್ಯಾಲಯದ ಉಸ್ತುವಾರಿ ಕೂಡಾ ನೀಡಬಹುದು ಎನ್ನಲಾಗಿದೆ.