ಲಿಸ್ಬನ್, ಏ 19 (DaijiworldNews/DB): ಅವಳಿ ಮಕ್ಕಳ ಆಗಮನದ ಬಗ್ಗೆ ಹಲವಾರು ಕನಸು ಕಂಡಿದ್ದ ಪೋರ್ಚುಗಲ್ ನ ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ದಂಪತಿಗೆ ಶಿಶುಗಳ ಜನನದ ವೇಳೆಯೇ ಆಘಾತ ಎದುರಾಗಿದೆ. ಕ್ರಿಶ್ಚಿಯಾನೋ ಪತ್ನಿ ಗಂಡು-ಹೆಣ್ಣು ಅವಳಿ ಶಿಶುಗಳಿಗೆ ಜನ್ಮ ನೀಡಿದ್ದು, ಈ ಪೈಕಿ ಗಂಡು ಮಗು ಮೃತಪಟ್ಟಿದೆ.
ನವಜಾತ ಗಂಡು ಮಗುವಿನ ಸಾವಿನ ದುಃಖವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗಳ ಆಗಮನ ಮಗನನ್ನು ಕಳೆದುಕೊಂಡ ನೋವನ್ನು ಮರೆಸಲು ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ರೊನಾಲ್ಡೊ ಮತ್ತು ಬಹುಕಾಲದ ಗೆಳತಿ ಜಾರ್ಜಿನಾ ಅವಳಿ ಶಿಶುಗಳಿಗೆ ಜನ್ಮ ನೀಡಲಿದ್ದಾರೆ ಎಂದು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಅದರಂತೆ ಜಾರ್ಜಿನಾ ಗಂಡು-ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದರು. ಆದರೆ ಸೋಮವಾರ ಪೋಸ್ಟ್ ಮಾಡಿರುವ ರೊನಾಲ್ಡೊ ಗಂಡು ಶಿಶು ಮೃತಪಟ್ಟಿರುವ ಬೇಸರದ ಸುದ್ದಿಯನ್ನು ಹೊರ ಹಾಕಿದ್ದಾರೆ.
ರೊನಾಲ್ಡೊ- ಜಾರ್ಜಿನಾ ದಂಪತಿಗೆ ಕ್ರಿಸ್ಟಿಯಾನೋ ಜೂನಿಯರ್, ಮಾಟಿಯೊ, ಇವಾ ಮತ್ತು ಅಲಾನಾ ಎಂಬ ನಾಲ್ವರು ಮಕ್ಕಳಿದ್ದಾರೆ.