ಮುಂಬೈ, ಏ 20 (DaijiworldNews/DB): ಐಪಿಎಲ್ ಪಂದ್ಯದಲ್ಲಿ ಫೀಲ್ಡ್ನಲ್ಲಿದ್ದಾಗಲೇ ಆರ್ಸಿಬಿಯ ಘಾತಕ ಬೌಲರ್ ಹರ್ಷಲ್ ಪಟೇಲ್ಗೆ ಬರಸಿಡಿಲಿನಂತೆರಗಿದ ಸುದ್ದಿಯೊಂದು ಅವರನ್ನು ದುಃಖದ ಮಡುವಿಗೆ ತಳ್ಳಿದೆ. ಅದೆಂದರೆ ಪ್ರೀತಿಯ ಅಕ್ಕನ ಅಕಾಲಿಕ ಮರಣ.
ಹೌದು. ಹರ್ಷಲ್ ಅಕ್ಕ ಅರ್ಚಿತಾ ಪಟೇಲ್ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಹರ್ಷಲ್ ಫೀಲ್ಡ್ನಲ್ಲಿ ಸೆಣಸಾಟ ನಡೆಸುತ್ತಿದ್ದಾಗಲೇ ಅವರನ್ನು ತಲುಪಿತ್ತು. ಪಂದ್ಯ ಮುಗಿದ ತತ್ಕ್ಷಣ ಮನೆಗೆ ತೆರಳಿ ಅಕ್ಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಹರ್ಷಲ್ ಚೆನ್ನೈ ವಿರುದ್ಧ ಆಡಬೇಕಾಗಿತ್ತಾದರೂ ಅಕ್ಕನ ಮರಣದ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದರೆ, ವಿಧಿವಿಧಾನಗಳು ಕೊನೆಗೊಂಡ ತತ್ಕ್ಷಣ ಮತ್ತೆ ಆರ್ಸಿಬಿ ತಂಡವನ್ನು ಸೇರಿಕೊಂಡ ಹರ್ಷಲ್ ಮೈದಾನಕ್ಕೆ ಇಳಿದಿದ್ದಾರೆ. ಅಷ್ಟಕ್ಕೂ ಅಕ್ಕನ ಅಗಲಿಕೆಯ ನೋವಿನಲ್ಲಿರುವ ಅವರಿಗೆ ಇಷ್ಟು ಬೇಗ ಮೈದಾನಕ್ಕೆ ಬರಲು ಸಾಧ್ಯವಾಗಿದ್ದೂ ಅಕ್ಕನ ಮಾತುಗಳೇ ಅಂತೆ. ಅನಾರೋಗ್ಯಕ್ಕೊಳಗಾದ ಅಕ್ಕ ಆಸ್ಪತ್ರೆಗೆ ಹೋದಾಗ ಆಟದ ಬಗ್ಗೆ ಗಮನ ಹರಿಸು, ನನ್ನ ಬಗ್ಗೆ ಚಿಂತಿಸದಿರು ಎಂಬ ಅಕ್ಕನ ಮಾತುಗಳು ಆಕೆಯ ಮರಣಾನಂತರವೂ ನನ್ನನ್ನು ಮೈದಾನಕ್ಕಿಳಿದು ಆಡಲು ಪ್ರೇರೇಪಿಸಿತು ಎಂದು ಭಾವುಕರಾಗಿ ಬರೆದಿದ್ದಾರೆ ಹರ್ಷಲ್.
ಅಲ್ಲದೆ ಅಕ್ಕನಿಗೆ ಭಾವುಕ ಸಂದೇಶ ರವಾನಿಸಿರುವ ಹರ್ಷಲ್, ನಮ್ಮ ಜೀವನದ ಅತ್ಯಂತ ಸಂತೋಷದಾಯಕ ಕ್ಷಣಗಳಲ್ಲಿ ನೋವೂ ಒಬ್ಬರು. ನಗುತ್ತಲೇ ಜೀವನದ ಕಷ್ಟ-ಸುಖಗಳನ್ನು ಸಮಾನವಾಗಿ ಎದುರಿಸಿದ ನೀವು ನಮಗೆಲ್ಲರಿಗೂ ಸ್ಪೂರ್ತಿ. ಜೀವನದ ಪ್ರತಿ ಕ್ಷಣವೂ ನಿಮ್ಮನ್ನು ಕಳೆದುಕೊಂಡ ಭಾವ ಕಾಡಲಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.