ಲಂಡನ್, ಜು 13 (DaijiworldNews/DB): ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಲಂಡನ್ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ಬಾಲ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಕಿಗೆ ತಾಗಿ ಬಾಲಕಿ ಗಾಯಗೊಂಡ ಘಟನೆ ಸಂಭವಿಸಿದೆ. ಇದರಿಂದ ಕೆಲ ಕಾಲ ಆಟವನ್ನು ಸ್ಥಗಿತಗೊಳಿಸಲಾಯಿತು.
ಲಂಡನ್ನ ಓವಲ್ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದ ಎರಡನೇ ಇನ್ನಿಂಗ್ಸ್ನ ಐದನೇ ಓವರ್ನಲ್ಲಿ ಇಂಗ್ಲೆಂಡ್ ಆಟಗಾರ ಡೇವಿಡ್ ವಿಲ್ಲಿ ಬೌಲ್ ಮಾಡಿದ ಶಾರ್ಟ್ ಬಾಲ್ನಲ್ಲಿ ರೋಹಿತ್ ಸಿಕ್ಸರ್ ಸಿಡಿಸಿದರು. ಆದರೆ ಈ ಸಿಕ್ಸರ್ ಸಂತಸ ತರುವ ಬದಲು ಬೇಸರದ ಘಟನೆಗೆ ಸಾಕ್ಷಿಯಾಯಿತು. ರೋಹಿತ್ ಬಾರಿಸಿದ ಸಿಕ್ಸರ್ ಬಾಲ್ ನೇರವಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಕಿಗೆ ಬಡಿಯಿತು. ಇದರಿಂದ ಬಾಲಕಿಗೆ ತೀವ್ರ ನೋವಾಗಿದ್ದ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೂಡಲೇ ಟೀಮ್ ಇಂಗ್ಲೆಂಡ್ನ ವೈದ್ಯಕೀಯ ತಂಡವು ಬಾಲಕಿಯ ಕಡೆಗೆ ದೌಡಾಯಿಸಿ ಆಕೆಗೆ ಚಿಕಿತ್ಸೆ ನೀಡಿದರು. ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.
ಬಾಲಕಿಗೆ ಬಾಲ್ ಬಡಿದು ನೋವುಂಟಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಟವನ್ನು ಪುನರಾರಂಭಿಸಲಾಯಿತು. ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ತಂಡ ಜಯಗಳಿಸಿದೆ.