ನವದೆಹಲಿ,ಫೆ 01 (MSP): ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಈಗಾಗಲೇ ಹಲವು ದಾಖಲೆ ಬರೆದಿದ್ದು, ಇದೀಗ ಈ ಸಾಲಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನ್ನೂರು ಪಂದ್ಯವಾಡಿದ ಮೊದಲ ಸಾಧಕಿಯಾಗಿ ಮಿಥಾಲಿ ರಾಜ್ ಹೊರಹೊಮ್ಮಿದ್ದಾರೆ.
ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಇಂದು ಹ್ಯಾಮಿಲ್ಟನ್ ಸೆಡ್ಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯವು ಮಿಥಾಲಿ ಅವರ ಇನ್ನೂರನೇ ಪಂದ್ಯವಾಗಿದ್ದು, ಇದೇ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. 16 ನೇ ವಯಸ್ಸಿನಲ್ಲಿ 1999ರಲ್ಲಿ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಮಿಥಾಲಿ ಈ ವರೆಗೂ ಒಟ್ಟು 200 ಏಕದಿನ ಪಂದ್ಯಗಳಲ್ಲಿ 51.33ರ ಸರಾಸರಿಯಲ್ಲಿ 6622 ರನ್ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಮಹಿಳಾ ಸಾಧಕಿ ಭಾರತೀಯ ಕ್ರಿಕೆಟ್ ಆಟಗಾರ್ತಿ ಮಿಥಾಲ್ ರಾಜ್.