ಮುಂಬೈ, ಆ 26 (DaijiworldNews/DB): ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಆರಂಭಿಕ ಯುವ ಆಟಗಾರ ಶುಭಮನ್ ಗಿಲ್ ನಡುವಿನ ಪ್ರೇಮ್ ಕಹಾನಿ ಬಗ್ಗೆ ಗುಸುಗುಸು ನಡೆಯುತ್ತಿರುವಾಗಲೇ ಅವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆಂಬ ಸುದ್ದಿಯೊಂದು ಹೊರ ಬಂದಿದೆ. ಇನ್ಸ್ಟಾಗ್ರಾಂನಲ್ಲಿ ಇಬ್ಬರೂ ಪರಸ್ಪರ ಅನ್ಫಾಲೋ ಮಾಡಿರುವುದೇ ಇದಕ್ಕೆ ಕಾರಣ.
ಸಾರಾ ತೆಂಡೂಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಸದ್ಯ ಮಾಡೆಲಿಂಗ್ನಲ್ಲಿ ಮಿಂಚುತ್ತಿರುವ ಅವರು ಬಾಲಿವುಡ್ಗೂ ಕಾಲಿಡಲು ಸಜ್ಜಾಗಿದ್ದಾರೆ. ಇತ್ತ ಶುಭಮನ್ ಗಿಲ್ ಕೂಡಾ ಕ್ರಿಕೆಟ್ ಕ್ಷೇತ್ರದಲ್ಲಿ ಆರಂಭಿಕ ಯುವ ಆಟಗಾರರಾಗಿ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾರಾ ಮತ್ತು ಶುಭಮನ್ ಗಿಲ್ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಪೋಸ್ಟ್ಗಳಿಗೆ ಲೈಕ್ ಮಾಡುವುದು, ಕಮೆಂಟ್ ಮಾಡುವುದು, ಟ್ಯಾಗ್ ಮಾಡಿಕೊಳ್ಳುವುದು ನಡೆದೇ ಇರುತ್ತಿತ್ತು. ಶುಭಮನ್ ಉತ್ತಮ ಪ್ರದರ್ಶನ ನೀಡಿದಾಗ ಸಾರಾ ಕೂಡಾ ಟ್ರೆಂಡ್ ಆಗುತ್ತಿದ್ದರು. ಜಿಂಬಾಬ್ವೆ ವಿರುದ್ದದ ಮೂರನೇ ಏಕದಿನ ಪಂದ್ಯ ಮುಕ್ತಾಯಗೊಂಡ ಬಳಿಕ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂದೂ ಸುದ್ದಿಯಾಗಿತ್ತು. ಆದರೆ ಇದೀಗ ಯುವ ಜೋಡಿಯ ಬ್ರೇಕಪ್ ಸುದ್ದಿ ಹೊರ ಬಿದ್ದಿದೆ.
ಸಾರಾ ಮತ್ತು ಶುಭಮನ್ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಅಲ್ಲದೆ ನಾನು ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇನೆಯೇ ಹೊರತು ಹಿಂದೆ ನಡೆದಿರುವುದರ ಕುರಿತಲ್ಲ ಎಂದು ಶುಭಮನ್ ಪೋಸ್ಟ್ ಹಾಕಿದ್ದು, ಅವರಿಬ್ಬರ ನಡುವೆ ಏನೋ ನಡೆದಿದೆ ಎಂಬುದಕ್ಕೆ ಪುಷ್ಠಿ ನೀಡುವಂತಿದೆ. ಹೀಗಾಗಿ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂದೇ ಅಭಿಮಾನಿಗಳು ನಂಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ.