ನವದೆಹಲಿ, ಆ 27(DaijiworldNews/MS): ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮೇಲಿನ ಅಮಾನತು ನಿರ್ಧಾರವನ್ನು ವಿಶ್ವ ಫುಟ್ಬಾಲ್ನ ಆಡಳಿತ ಮಂಡಳಿ (ಫಿಫಾ) ಹಿಂತೆಗೆದುಕೊಂಡಿದೆ. ಈ ಮೂಲಕ ಭಾರತೀಯ ಫುಟ್ಬಾಲ್ಗೆ ಅತಿ ದೊಡ್ಡ ನಿರಾಳತೆ ದೊರೆತಂತಾಗಿದೆ. ಇದರೊಂದಿಗೆ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯವನ್ನು ಭಾರತಕ್ಕೆ ಮತ್ತೆ ನೀಡಲಾಗಿದೆ.
ಫಿಫಾ ತನ್ನ ಹೇಳಿಕೆಯಲ್ಲಿ, 'ಆಗಸ್ಟ್ 25ರಂದು ತಕ್ಷಣವೇ ಜಾರಿಗೆ ಬರುವಂತೆ ಎಐಎಫ್ಎಫ್ ಅಮಾನತುಗೊಳಿಸುವಿಕೆಯನ್ನು ತೆಗೆದುಹಾಕಲು ಕೌನ್ಸಿಲ್ ನಿರ್ಧರಿಸಿದೆ. ಈಗ FIFA U-17 ಮಹಿಳಾ ವಿಶ್ವಕಪ್ 11ರಿಂದ ಅಕ್ಟೋಬರ್ 30ರವರೆಗೆ ಭಾರತದಲ್ಲಿ ಹಳೆಯ ಯೋಜನೆಯ ಪ್ರಕಾರ ಆಯೋಜಿಸಬಹುದು ಎಂದು ಹೇಳಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಫಿಫಾ ಆಗಸ್ಟ್ 16 ರಂದು ಭಾರತವನ್ನು ನಿಷೇಧಿಸಿತ್ತು.
ಈ ಹಿಂದೆ ಫೆಡರೇಶನ್ ಅನ್ನು ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ಆಡಳಿತ ಮಂಡಳಿಯು ನಿಯಂತ್ರಿಸುತ್ತಿತ್ತು. ಹೊಸ ಸಮಿತಿಯನ್ನು ಆಯ್ಕೆ ಮಾಡುವವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆಡಳಿತ ಮಂಡಳಿಗೆ ಅಧಿಕಾರವನ್ನು ನೀಡಿತು. ಇದೇ ಅವಧಿಯಲ್ಲಿ ಈ ಹಿಂದೆ ಎಐಎಫ್ಎಫ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿತರಾಗಿದ್ದ ಪ್ರಫುಲ್ ಪಟೇಲ್ ಅವರು ಫೆಡರೇಶನ್ನಲ್ಲಿ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಕಂಡುಬಂದಿತ್ತು. ಇವೆಲ್ಲವನ್ನೂ ಪರಿಗಣಿಸಿ ಎಐಎಫ್ಎಫ್ ಅನ್ನು ಅಮಾನತುಗೊಳಿಸಲು ಫಿಫಾ ನಿರ್ಧರಿಸಿತ್ತು.