ದುಬೈ, ಆ 28 (DaijiworldNews/DB): ಇಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಗಾಗಿ ಇಡೀ ಭಾರತ ಕಾತರವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಭಾರತ ತಂಡವು ತನ್ನ ಬದ್ಧ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸಾಡಲಿದೆ. ರೋಹಿತ್ ಶರ್ಮಾ ನಾಯಕತ್ವಕ್ಕೆ ಇಂದಿನ ಪಂದ್ಯ ಸತ್ವ ಪರೀಕ್ಷೆಯಾಗಿದೆ.
ಹತ್ತು ತಿಂಗಳ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕ್ ತಂಡದೆದುರು ಸೋತಿದ್ದು, ವಿಶ್ವಕಪ್ ಟೂರ್ನಿ ಇತಿಹಾಸರಲ್ಲಿ ನೆರೆರಾಷ್ಟ್ರದ ತಂಡದೊಂದಿಗೆ ಭಾರತ ಸೋತ ಮೊದಲ ಪಂದ್ಯ ಅದಾಗಿತ್ತು. ಹೀಗಾಗಿ ಇಂದಿನ ಪಂದ್ಯ ಭಾರತ ತಂಡಕ್ಕೆ ಸತ್ವ ಪರೀಕ್ಷೆಯಾಗಿಯೇ ಇರಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆಯುವ ಇಂದಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಹಲವು ಸಮಯದಿಂದ ವಿರಾಮದಲ್ಲಿದ್ದ ವಿರಾಟ್ ಕೊಹ್ಲಿ ಕೂಡಾ ಇದೀಗ ಫಾರ್ಮ್ಗೆ ಮರಳಿದ್ದು, ಅದ್ಬುತ ಪ್ರದರ್ಶನ ನೀಡುವ ಸವಾಲೂ ಅವರ ಮುಂದಿದೆ.
ಕನ್ನಡಿಗ ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ ಹಾಗೂ ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಶ್ವಿನ್, ಟಿ20 ಪರಿಣತ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಾಕ್ ತಂಡದೊಂದಿಗೆ ಸೆಣಸಾಡಲು ಸಜ್ಜಾಗಿದ್ದಾರೆ. ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಇಂದಿನ ಪಂದ್ಯದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ.
ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ಆಡುವುದರೊಂದಿಗೆ ವಿರಾಟ್ ಕೊಹ್ಲಿ ಟಿ20 ಮಾದರಿಯ ನೂರು ಪಂದ್ಯಗಳನ್ನು ಪೂರೈಸಲಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಮಾದರಿಗಳಲ್ಲಿಯೂ ನೂರು ಪಂದ್ಯಗಳನ್ನಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ನೂರನೇ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುವರೇ ಎಂಬುದನ್ನು ಕಾದು ನೋಡಬೇಕಿದೆ.