ದುಬೈ, ಆ 30 (DaijiworldNews/DB): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯಾಟದ ವೇಳೆ ತ್ರಿವರ್ಣ ಧ್ವಜವನ್ನು ಹಿಡಿದುಕೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಆದರೆ ಅವರು ರಾಷ್ಟ್ರಧ್ವಜ ಹಿಡಿದುಕೊಳ್ಳದಿರಲು ಅಸಲಿ ಕಾರಣ ಇಲ್ಲಿದೆ.
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರೂ ಆಗಿರುವುದೇ ಅವರು ಭಾರತದ ರಾಷ್ಟ್ರಧ್ವಜ ಹಿಡಿದುಕೊಳ್ಳಲು ನಿರಾಕರಿಸಿರುವುದಕ್ಕೆ ಕಾರಣ. ಏಷ್ಯಾಕಪ್ ಟೂರ್ನಿಯ ಪ್ರತಿನಿಧಿಯಾಗಿರುವವರು ತಟಸ್ಥವಾಗಿರಬೇಕೇ ಹೊರತು ಒಂದು ದೇಶದ ಪರವಾಗಿ ನಿಲ್ಲುವಂತಿಲ್ಲ ಎಂದು ನಿಯಮ ಹೇಳುತ್ತದೆ. ಜಯ್ ಶಾ ಅವರು ಭಾರತೀಯರೇ ಆದರೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿರುವುದರಿಂದ ಒಂದು ದೇಶದ ಪರವಾಗಿ ಇರುವಂತಿಲ್ಲ ಎಂಬ ನಿಯಮವಿರುವ ಕಾರಣ ದೇಶದ ರಾಷ್ಟ್ರಧ್ವಜವನ್ನು ಅವರು ಹಿಡಿದುಕೊಂಡಿಲ್ಲ ಎನ್ನಲಾಗಿದೆ.
ವಿಐಪಿ ಗ್ಯಾಲರಿಯಲ್ಲೇನಾಯಿತು?
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ತೀವ್ರ ಸೆಣಸಾಟವಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತ ತಂಡದ ಗೆಲುವಿಗೆ ಕಾರಣರಾದರು. ತೀವ್ರ ಪೈಪೋಟಿಯ ನಡುವೆಯೇ ಕೊನೆ ಕ್ಷಣದಲ್ಲಿ ಪಾಂಡ್ಯ ಹೊಡೆದ ಸಿಕ್ಸರ್ನಿಂದಾಗಿ ತಂಡ ಗೆದ್ದದ್ದಕ್ಕೆ ಗ್ಯಾಲರಿಯಲ್ಲಿ ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಜಯ್ ಶಾ ಅವರು ವಿಐಪಿ ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ಹೊಡೆದರು. ಜಯ್ ಶಾರನ್ನು ನೋಡಿದ ವ್ಯಕ್ತಿಯೊಬ್ಬರು ಕೂಡಲೇ ಅವರ ಬಳಿ ತೆರಳಿ ತ್ರಿವರ್ಣ ಧ್ವಜವನ್ನು ಅವರತ್ತ ಚಾಚಿದರು. ಆದರೆ ಇದನ್ನು ಜಯ್ ಶಾ ತೆಗೆದುಕೊಳ್ಳಲು ನಿರಾಕರಿಸಿದ್ದರು. ಜಯ್ ಶಾ ತ್ರಿವರ್ಣ ಧ್ವಜ ಸ್ವೀಕರಿಸಲು ನಿರಾಕರಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಜಯ್ ಶಾ ವಿರುದ್ದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರು ಕೂಡಾ ಈ ವೀಡಿಯೋ ಹಂಚಿಕೊಂಡು ಜಯ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ರಾಜ್ಯಸಭಾ ಸದಸ್ಯೆ ಮತ್ತು ಶಿವಸೇನೆಯ ನಾಯಕಿ ಪ್ರಿಯಾಂಕ್ ಚತುರ್ವೇದಿ ಅವರು, ಎಸಿಸಿ ಅಧ್ಯಕ್ಷರಾಗಿ ನೀವು ತಟಸ್ಥವಾಗಿರಬೇಕು ಎಂದು ಮಾತ್ರಕ್ಕೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಿಲ್ಲ ಎಂದು ಜಯ್ ಶಾ ವಿರುದ್ದ ಹರಿ ಹಾಯ್ದಿದ್ದರು.