ದುಬೈ, ಆ 30 (DaijiworldNews/SM): ಏಷ್ಯಾಕಪ್ 2022 ಟೂರ್ನಿಯ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 128 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಆಫ್ಘಾನಿಸ್ತಾನ 18.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್ ಗಳಲ್ಲಿ ಮೊಸದ್ದೇಕ್ ಹುಸೇನ್ (ಅಜೇಯ 48) ಅವರ ಏಕಾಂಗಿ ಹೋರಾಟದ ನೆರವಿನಂದ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಆಪ್ಘನ್ ಪರ ಮಾರಕ ಬೌಲಿಂದ್ ದಾಳಿ ನಡೆಸಿದ ಮುಜೀಬ್ ಮತ್ತು ರಷೀದ್ ಖಾನ್ ತಲಾ 3 ವಿಕೆಟ್ ಪಡೆದರು.
ಬಾಂಗ್ಲಾದೇಶ ನೀಡಿದ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಇಬ್ರಾಹಿಂ ಜದ್ರಾನ್ (ಅಜೇಯ 42) ಮತ್ತು ನಜೀಬುಲ್ಲಾ ಜದ್ರಾನ್ (ಅಜೇಯ 43) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 18.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಜಯ ಸಾಧಿಸಿತು. ಬೌಲಿಂಗ್ ನಲ್ಲಿ ಬಾಂಗ್ಲಾದೇಶದ ಪತನಕ್ಕೆ ಕಾರಣವಾದ ಮುಜೀಬ್ ಉರ್ ರೆಹಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನ ಮೂಲಕ ಆಫ್ಘಾನಿಸ್ತಾನ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದ್ದು, ಈ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತ್ತು.