ನವದೆಹಲಿ, ಸೆ 02 (DaijiworldNews/SM): ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಏಷ್ಯಾಕಪ್ನ ಉಳಿದ ಪಂದ್ಯಗಳಿಗೆ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ತಿಳಿಸಿದೆ.
ಜಡೇಜಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯಾವಳಿಯ ಉಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ. ಈ ಕಾರಣದಿಂದಾಗಿ ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿಕೊಂಡಿದೆ. ಅಕ್ಷರ್ ಪಟೇಲ್ರನ್ನು ಈ ಹಿಂದೆ ತಂಡದಲ್ಲಿ ಸ್ಟ್ಯಾಂಡ್ಬೈ ಆಟಗಾರರೆಂದು ಹೆಸರಿಸಲಾಗಿತ್ತು. ಅಕ್ಷರ್ ಪಟೇಲ್ ಶೀಘ್ರದಲ್ಲೇ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜಡೇಜಾ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ವಿರುದ್ಧದ ಪಂದ್ಯಗಳಲ್ಲಿ ಆಡಿದ್ದರು.
ಪಾಕಿಸ್ತಾನದ ವಿರುದ್ಧ, ಜಡೇಜಾ 35 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ಯಾವುದೇ ವಿಕೆಟ್ ಪಡೆದಿರಲಿಲ್ಲ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಒಂದು ವಿಕೆಟ್ ಪಡೆದರು, ಬ್ಯಾಟಿಂಗ್ನಲ್ಲಿ ಅವಕಾಶ ಸಿಗಲಿಲ್ಲ. ಆ ಮೂಲಕ ಏಷ್ಯಾಕಪ್ ನಲ್ಲಿ ಆಡಿರುವ ಎರಡು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಮುಂದಿನ ಪಂದ್ಯಕ್ಕೂ ಭರವಸೆ ಮೂಡಿಸಿದ್ದರು. ಆದರೆ, ಇದೀಗ ಗಾಯದ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಗುಳಿಯಲಿದ್ದಾರೆ.