ಕಠ್ಮಂಡು, ಸೆ 09 (DaijiworldNews/DB): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪದಡಿ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ ವಿರುದ್ದ ದೂರು ದಾಖಲಾಗಿದೆ.
17 ವರ್ಷದ ಬಾಲಕಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ್ದಾರೆಂದು ಬಾಲಕಿಯು ಗೋಶಾಲಾ ಮೆಟ್ರೊಪಾಲಿಟಿನ್ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಸಂದೀಪ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
ಘಟನೆ ಮೂರು ವಾರಗಳ ಹಿಂದೆ ನಡೆದಿದೆ. ತನ್ನನ್ನು ಕಠ್ಮಂಡುವಿನ ವಿವಿಧ ತಾಣಗಳಿಗೆ ಕರೆದೊಯ್ದ ಸಂದೀಪ್ ಬಳಿಕ ಹೊಟೇಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಸಂತ್ರಸ್ತ ಬಾಲಕಿಯ ದೂರಿನ ಆಧಾರದಲ್ಲಿ ಸಿಸಿಟಿವಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಪೂರಕ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದ್ದು, ದೂರಿನ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ತಮ್ಮ ಮೇಲೆ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಸಂದೀಪ್ ಲಮಿಚಾನೆ, ಈ ಆರೋಪ ನಿರಾಧಾರವಾಗಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಈ ಬಗ್ಗೆ ನೇಪಾಳ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.