ನವದೆಹಲಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಭರ್ಬರಿ ಜಯ ಗಳಿಸಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು 27.1 ಓವರ್ ಗಳಲ್ಲಿ 99 ರನ್ ಗಳಿಗೆ ಕಟ್ಟಿಹಾಕಿತು.
ಭಾರತದ ಮಾರಕ ಬೌಲಿಂಗ್ ದಾಳಿಯ ಮುಂದೆ ರನ್ ಗಳಿಸುವುದಕ್ಕೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಹೆಣಗಿದರು. ಆರಂಭಿಕ ಆಟಗಾರರಾದ ಜನೆಮನ್ ಮಲನ್ ಹಾಗೂ ಕ್ವಿಂಟನ್ ಡಿ ಕಾಕ್ ಅತ್ಯಂತ ವೇಗವಾಗಿ ವಿಕೆಟ್ ಒಪ್ಪಿಸಿದ ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತು. 4ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಹೆನ್ರಿಕ್ ಕ್ಲಾಸೆನ್ ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ದಕ್ಷಿಣ ಆಫ್ರಿಕಾದ ಬಹುತೇಕ ಬ್ಯಾಟ್ಸ್ಮನ್ ಗಳು 2 ಅಂಕಿ ರನ್ ಗಳಿಸಲೂ ಸಾಧ್ಯವಾಗಲಿಲ್ಲ.
ಭಾರತದ ಪರ 18 ರನ್ ನೀಡಿ 4 ವಿಕೆಟ್ ಪಡೆದ ಕುಲ್ದೀಪ್ ಯಾದವ್ ಅತ್ಯುತ್ತಮ ಬೌಲರ್ ಎನಿಸಿದರು. ವಾಷಿಂಗ್ ಟನ್ ಸುಂದರ್ 15 ರನ್ ನೀಡಿ 2 ವಿಕೆಟ್, ಮೊಹಮ್ಮದ್ ಸಿರಾಜ್ 17 ರನ್ ನೀಡಿ 2 ವಿಕೆಟ್, ಶಹಬಾಜ್ ಅಹಮದ್ 32 ರನ್ ನೀಡಿ 2 ವಿಕೆಟ್ ಗಳಿಸಿದರು.