ನವದೆಹಲಿ, ಅ 12 (DaijiworldNews/DB): ಈ ಬಾರಿಯ ಟಿ20 ವಿಶ್ವಕಪ್ನ್ನು ಬೆಳ್ಳಿ ಪರದೆಯಲ್ಲಿ ಕಣ್ತುಂಬಿಸಿಕೊಳ್ಳುವ ಅವಕಾಶ ಕ್ರೀಡಾಪ್ರೇಮಿಗಳಿಗೆ ಲಭ್ಯವಾಗಲಿದೆ. ಟೀಂ ಇಂಡಿಯಾದ ಎಲ್ಲಾ ಗ್ರೂಪ್ ಪಂದ್ಯಗಳು ಐನಾಕ್ಸ್ ಚಿತ್ರಮಂದಿರಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.
ಅಕ್ಟೋಬರ್ 23ರಂದು ಆಸ್ಟ್ರೇಲಿಯದಲ್ಲಿ ಪಾಕಿಸ್ತಾನದೊಂದಿಗೆ ಟೀಂ ಇಂಡಿಯಾ ಆಡುವುದರೊಂದಿಗೆ ಟೀಂ ಇಂಡಿಯಾದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ. ಈಗಾಗಲೇ ಈ ಸಲುವಾಗಿ ಕಾಂಗರೂ ನಾಡಿಗೆ ಟೀಂ ಇಂಡಿಯಾ ಪ್ರಯಾಣ ಬೆಳೆಸಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಪಾಕ್ ಮತ್ತು ಟೀಂ ಇಂಡಿಯಾ ನಡುವೆ ಮೊದಲ ಪಂದ್ಯ ನಡೆಯುವ ಬಗ್ಗೆ ಈಗಾಗಲೇ ಕ್ರೀಡಾಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.
ಹೀಗಿರುವಾಗಲೇ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರವು ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ನೀಡಿದು, ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳನ್ನು ದೇಶಾದ್ಯಂತ ಎಲ್ಲಾ ಐನಾಕ್ಸ್ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರ ಮಾಡುವುದಾಗಿ ಹೇಳಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನೊಂದಿಗೆ ಐನಾಕ್ಸ್ ಐಎನ್ಎಕ್ಸ್ ಲೀಸರ್ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಿದೆ.
ದೇಶದ 25 ಕ್ಕೂ ಹೆಚ್ಚು ನಗರಗಳಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಪಂದ್ಯದ ನೇರ ಪ್ರದರ್ಶನ ನಡೆಯಲಿದೆ. ಆ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ನ ರೋಮಾಂಚಕ ಅನುಭವವನ್ನು ಬೆಳ್ಳಿ ಪರದೆಯಲ್ಲಿ ಪ್ರದರ್ಶಿಸುವುದು ನಮ್ಮ ಉದ್ದೇಶ ಎಂದು ಐಎನ್ಎಕ್ಸ್ ಲೀಸರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ವಿಶಾಲ್ ಹೇಳಿದ್ದಾರೆ.
ಟಿ20 ವಿಶ್ವಕಪ್ನ ಎಂಟನೇ ಆವೃತ್ತಿಯು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಟೀಂ ಇಂಡಿಯಾವು ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಅಕ್ಟೋಬರ್ 27ರಂದು ಭಾರತ ಅರ್ಹತಾ ಸುತ್ತಿನಲ್ಲಿ ಎ ಗುಂಪಿನ ರನ್ನರ್ ಅಪ್ ತಂಡದೊಂದಿಗೆ ಸೆಣಸಾಡಲಿದೆ. ಅಕ್ಟೋಬರ್ 30ರಂದು ದಕ್ಷಿಣ ಆಫ್ರಿಕಾ ವಿರುದ್ಧ, ನವೆಂಬರ್ 2ರಂದು ಬಾಂಗ್ಲಾದೇಶದ ವಿರುದ್ದ, ನವೆಂಬರ್ 6 ರಂದು ಬಿ ಗುಂಪಿನಿಂದ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಟೀಂ ಇಂಡಿಯಾ ಆಡಲಿದೆ.