ನವದೆಹಲಿ, ಫೆ 14(SM): ಹ್ಯಾಮಿಲ್ಟನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಭಾರತದ ಸೋಲಿಗೆ ದಿನೇಶ್ ಕಾರ್ತಿಕ್ ಅಂತಿಮ ಓವರ್ನಲ್ಲಿ ಸಿಂಗಲ್ ತೆಗೆದುಕೊಳ್ಳದಿರೋದೆ ಕಾರಣ ಅಂತ ಹಲವರು ಆಕ್ರೊಶ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಇದೀಗ ದಿನೇಶ್ ಕಾರ್ತಿಕ್ ಸಮರ್ಥನೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಾರ್ತಿಕ್, ಅಂತಿಮ ಓವರ್ನಲ್ಲಿ ನನಗೆ ಸಿಕ್ಸರ್ ಭಾರಿಸುವ ವಿಶ್ವಾಸವಿತ್ತು. ಅದೇ ಕಾರಣಕ್ಕಾಗಿ ನಾನು ಸಿಂಗಲ್ ರನ್ ಗಳನ್ನು ನಿರಾಕರಿಸಿದ್ದೆ ಎಂದಿದ್ದಾರೆ.
ಟೀಂ ಇಂಡಿಯಾಗೆ ಲಾಸ್ಟ್ ಓವರ್ನಲ್ಲಿ ಗೆಲುವಿನ ನಗೆ ಬೀರಲು 16 ರನ್ಗಳ ಅಗತ್ಯತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿ 2 ರನ್ ಪೇರಿಸಿದರು. ನಂತರ 2ನೇ ಹಾಗೂ 3ನೇ ಎಸೆತದಲ್ಲಿ ಒಂದು ರನ್ ತೆಗೆದುಕೊಳ್ಳುವ ಅವಕಾಶವಿದ್ದರೂ, ರನ್ ತೆಗೆಯದೆ ತಾವೇ ಪಂದ್ಯವನ್ನ ಗೆಲುವಿನ ದಡ ಸೇರಿಸುವ ಆತ್ಮವಿಶ್ವಾಸದೊಂದಿಗೆ ಕೃನಾಲ್ ಪಾಂಡ್ಯಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿರಲಿಲ್ಲ.
ಹೀಗಾಗಿ ಮುಂದಿನ ಎಸೆತದಲ್ಲಿ ಕಾರ್ತಿಕ್ ಜೋರಾಗಿ ಹೊಡೆದ್ರೂ ಅದು ನೇರವಾಗಿ ಫೀಲ್ಡರ್ ಕೈ ಸೇರಿದ ಪರಿಣಾಮ ಕೇವಲ ಒಂದು ರನ್ ದಕ್ಕಿತು. ನಂತರ ಬ್ಯಾಟಿಂಗ್ ಮಾಡಲು ಬಂದ ಕೃನಾಲ್ ಕೂಡ ಸಿಂಗಲ್ ರನ್ ತೆಗೆದುಕೊಂಡರು. ಮುಂದಿನ ಎಸೆತದಲ್ಲಿ ಕಾರ್ತಿಕ್ ಸಿಕ್ಸ್ರ್ ಸಿಡಿಸಿದ್ರೂ ಕೂಡ ಭಾರತ ತಂಡ 4ರನ್ಗಳ ಅಂತರದೊಂದಿಗೆ ನ್ಯೂಜಿಲ್ಯಾಂಡ್ ಗೆ ಶರಣಾಯಿತು.