ನವದೆಹಲಿ, ಅ 17 (DaijiworldNews/DB): ಈ ಬಾರಿಯ ಟಿ 20 ವಿಶ್ವಕಪ್ ಸಂದರ್ಭದಲ್ಲಿ ಆಟಗಾರರಿಗೆ ಕೊರೊನಾ ಸೋಂಕು ಬಾಧಿಸಿದರೆ ಆಟದಿಂದ ಹಿಂದೆ ಸರಿದು ಕ್ವಾರಂಟೈನ್ನಲ್ಲಿರಬೇಕಾದ ಅವಶ್ಯವಿಲ್ಲ. ಏಕೆಂದರೆ ಕೊರೊನಾ ಸೋಂಕಿಗೊಳಗಾದರೂ ಆಡುವ ಅವಕಾಶವನ್ನು ಐಸಿಸಿ ಕಲ್ಪಿಸಿದೆ.
ಟಿ 20 ವಿಶ್ವಕಪ್ ನಿಯಮಾವಳಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈಗಾಗಲೇ ಬಿಡುಗಡೆ ಮಾಡಿದ್ದು, ಇದರಲ್ಲಿ ಪಂದ್ಯಾವಳಿ ಸಂದರ್ಭದಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆ ಇರುವುದಿಲ್ಲ. ಕೊರೊನಾ ಸೋಂಕಿಗೊಳಗಾದಲ್ಲಿ ಆಟಗಾರರನ್ನು ಕ್ವಾರಂಟೈನ್ನಲ್ಲಿ ಇಡುವಂತಿಲ್ಲ. ಸೋಂಕಿದ್ದರೂ ಆತ ಆಡಲು ದೈಹಿಕ ಸದೃಢತೆ ಕಾಯ್ದುಕೊಂಡಿದ್ದರೆ ಆತ ತಂಡದಲ್ಲಿ ಸೇರಿಕೊಳ್ಳಬಹುದು. ಆದರೆ ಇದಕ್ಕೆ ವೈದ್ಯರ ಅನುಮತಿ ಬೇಕಾಗುತ್ತದೆ ಎಂದು ತಿಳಿಸಿದೆ. ಜಾಗತಿಕವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳುತ್ತಿರುವುದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದೂ ಹೇಳಿದೆ.
ನಿನ್ನೆಯಿಂದ ಟಿ 20 ವಿಶ್ವಕಪ್ ಆರಂಭವಾಗಿದೆ. ಇದರೊಂದಿಗೆ ಐಸಿಸಿಯು ನಿಯಮಾವಳಿಗಳಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈ ಹಿಂದೆ ಆಟಗಾರರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿತ್ತು ಮತ್ತು ದೃಢಪಟ್ಟಲ್ಲಿ ಕ್ವಾರಂಟೈನ್ ಕೂಡಾ ಅಗತ್ಯವಾಗಿತ್ತು. ಆದರೆ ಆ ನಿಯಮವನ್ನು ಐಸಿಸಿ ಬದಲಾಯಿಸಿ ಕೋವಿಡ್ ಪರೀಕ್ಷೆ ನಡೆಸುವುದಿಲ್ಲ ಮತ್ತು ಕೊರೊನಾ ಸೋಂಕಿಗೊಳಗಾಗಿದ್ದರೂ ಆಡಬಹುದು ಎಂದು ತಿಳಿಸಿದೆ.
2022ರ ಕಾಮನ್ವೆಲ್ತ್ ಗೇಮ್ಸ್ ಫೈನಲ್ನಲ್ಲಿಯೂ ಕೊರೊನಾ ಸೋಂಕಿತ ಆಟಗಾರರಿಗೆ ಆಡಲು ಐಸಿಸಿ ಅವಕಾಶ ಕಲ್ಪಿಸಿತ್ತು. ಈ ನಿಯಮ ಸಡಿಲಿಕೆಯಿಂದಾಗಿ ಕೊರೊನಾ ಸೋಂಕಿಗೊಳಗಾದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ತಹ್ಲಿಯಾ ಮೆಕ್ಗ್ರಾತ್ಗೆ ತಂಡದಲ್ಲಿ ಆಡಲು ಅವಕಾಶ ಲಭಿಸಿತ್ತು.