ಆಸ್ಟ್ರೇಲಿಯಾ, ಅ 23 (DaijiworldNews/DB): ಐರ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಜಾರ್ಜ್ ಡಾಕ್ರೆಲ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆದಾಗ್ಯೂ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ದದ ಸೂಪರ್ 12 ಪಂದ್ಯದಲ್ಲಿಅವರು ಕಣಕ್ಕಿಳಿದಿದ್ದಾರೆ.
ಈ ಬಗ್ಗೆ ಸ್ವತಃ ಐರ್ಲೆಂಡ್ ಕ್ರಿಕೆಟ್ ಮಂಡಳಿಯೇ ಹೇಳಿದ್ದು, ಭಾನುವಾರದ ಪಂದ್ಯದಲ್ಲಿ ಜಾರ್ಜ್ ಆಡಿದ್ದಾರೆ ಎಂದಿದೆ. ಜಾರ್ಜ್ ಅವರಿಗೆ ಸೋಂಕಿನ ಕೆಲವು ಸಣ್ಣ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಅವರು ಆಡಲು ಸಮರ್ಥರಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ತಂಡದಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದಿದೆ. ಕೊರೊನಾ ಬಾಧಿಸಿದ್ದರೂ ಎದೆಗುಂದದೆ ಆಡಿದ ಜಾರ್ಜ 16 ಎಸೆತಗಳನ್ನು ಎದುರಿಸಿ 14 ರನ್ ಗಳಿಸಿದರು.
ಐಸಿಸಿ ನಿಯಮಾನುಸಾರ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೊರೊನಾ ಸೋಂಕಿಗೊಳಗಾದ ಆಟಗಾರ ಆಡಲು ಸಮರ್ಥನಾದಲ್ಲಿ ಯಾವುದೇ ನಿಷೇಧಗಳಿಲ್ಲ ಎಂದಿದೆ. ಅಲ್ಲದೆ ಕೊರೊನಾ ಪರೀಕ್ಷೆಗಳನ್ನೂ ಆಟಗಾರರಿಗೆ ಮಾಡುವುದಿಲ್ಲ ಎಂದಿದೆ.
ಆಟಗಾರನಿಗೆ ಕೋವಿಡ್ ಪರೀಕ್ಷೆಯನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕಡ್ಡಾಯಗೊಳಿಸಿಲ್ಲ. ಒಂದು ವೇಳೆ ಯಾವುದೇ ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದರೆ ಆತನನ್ನು ವೈದ್ಯಕೀಯ ಸಿಬಂದಿ ಪರೀಕ್ಷಿಸಿ ಆತ ಆಡಬಹುದೇ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಆಟಗಾರ ಆಡಲು ಸದೃಢನಾಗಿದ್ದಲ್ಲಿ, ವೈದ್ಯಕೀಯ ಸಿಬಂದಿ ಸಲಹೆ ಮೇರೆಗೆ ಆತ ಮೈದಾನಕ್ಕಿಳಿಯಬಹುದು ಎಂದು ಐಸಿಸಿ ಹಿಂದಿನ ನಿಯಮವನ್ನು ಬದಲಾಯಿಸಿತ್ತು.