ವೆಸ್ಟ್ ಇಂಡೀಸ್, ಫೆ 18(SM): ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ ನ್ನು ನಿಬ್ಬರಗಾಗಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಪ್ರತಿಭೆ ಕ್ರಿಸ್ಟೋಫರ್ ಹೆನ್ರಿ ಗೇಲ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದೆ.
ಇದೇ ವರ್ಷದ ಮೇ ತಿಂಗಳಾಂತ್ಯದಲ್ಲಿ ನಡೆಯುವ ವಿಶ್ವಕಪ್ ಪಂದ್ಯದ ಬಳಿಕ ಏಕದಿನ ಕ್ರಿಕೆಟ್ ನಿಂದ ದೂರ ಉಳಿಯೂವುದಾಗಿ ಕ್ರಿಸ್ ಗೇಲ್ ಹೇಳಿಕೊಂಡಿದ್ದಾರೆ.
39 ರ ಹರೆಯದ ಗೇಲ್, 284 ಏಕದಿನ ಪಂದ್ಯಗಳನ್ನಾಡಿದ್ದಾರೆ. 36.98 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು 9727 ರನ್ ಗೇಲ್ ಖಾತೆಯಲ್ಲಿದೆ. ತಾನು ಆಡಿರುವ ಪಂದ್ಯಗಳಲ್ಲಿ ಸುಮಾರು 23 ಶತಕ, ಒಂದು ದ್ವಿಶತಕ ಮತ್ತು 49 ಏಕದಿನ ಅರ್ಧ ಶತಕಗಳು ಗೇಲ್ ಹೆಸರಿನಲ್ಲಿವೆ.
ವೆಸ್ಟ್ ಇಂಡೀಸ್ ಪರ ಬ್ರಿಯಾನ್ ಲಾರಾ ಅತೀ ಹೆಚ್ಚು ರನ್ ಗಳಿಸಿದ್ದರೆ, ಗೇಲ್ 2ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೇಲ್ ಅವರು ಐದಂಕಿಯನ್ನು ಪಡೆಯಲು(ಹತ್ತು ಸಾವಿರ ರನ್ ಗಡಿ ದಾಟಲು) ಅವರಿಗೆ ಬೇಕಾಗಿರುವುದು ಕೇವಲ 273 ರನ್ ಗಳು ಮಾತ್ರ. ವೆಸ್ಟ್ ಇಂಡೀಸ್ ಪರ ಏಕದಿನ ಅತೀ ಹೆಚ್ಚು ಶತಕ ಮತ್ತು ವಿಂಡೀಸ್ ಪರ ಏಕಮಾತ್ರ ದ್ವಿಶತಕ ವೀರ ಎಂಬ ಹೆಗ್ಗಳಿಕೆ ಗೇಲ್ ಅವರಿಗಿದೆ.
ಪ್ರವಾಸಿ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಗೆ ಆಯ್ಕೆಯಾಗಿರುವ ಈ ಕೆರಿಬಿಯನ್ ಸ್ಪೋಟಕ ಆಟಗಾರ ಕೊನೆಯ ಬಾರಿಗೆ ತವರಲ್ಲಿ ಏಕದಿನ ಪಂದ್ಯ ಆಡಲಿದ್ದಾರೆ. ವಿದಾಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಗೇಲ್, ವಿಶ್ವಕಪ್ ಗೆಲ್ಲುವುದು ನನ್ನ ಗುರಿಯಾಗಿದ್ದು, ಅದಕ್ಕಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.