ಅಡಿಲೇಡ್, ನ 02 (DaijiworldNews/SM): ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಗೆಲ್ಲಲು ಪರದಾಟ ನಡೆಸಿತು. ಪಂದ್ಯದ ಫಲಿತಾಂಶಕ್ಕೆ ಕೊನೇ ಓವರ್ ನ ಅಂತಿಮ ಎಸೆತದ ತನಕ ಕಾಯಬೇಕಾಯಿತು.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಕಾಟದ ಹೊರತಾಗಿಯೂ ಭಾರತ ತಂಡ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಟೀಂ ಇಂಡಿಯಾ ನೀಡಿದ್ದ 185ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ಭರ್ಜರಿ ಆರಂಭ ಪಡೆದಿತ್ತು. ಬಾಂಗ್ಲಾಪರ ಆರಂಭಿಕ ಆಟಗಾರ ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 60ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಜ್ಮಲ್ ಹುಸೇನ್ ಶಾಂತೋ 25 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 21 ರನ್ ಗಳಿಸಿದರು. ಇಬ್ಬರೂ ಅಪಾಯಕಾರಿಯಾಗುತ್ತಿದ್ದಾರೆ ಎನ್ನುವ ಹೊತ್ತಿಗೆ ಮಳೆ ಅಡ್ಡಿಪಡಿಸಿತು. ಸುಮಾರು ಅರ್ಧಗಂಟೆಗಳ ಕಾಲ ಸುರಿದ ಮಳೆ ಬಳಿಕ ನಿಂತಿತು.
ಈ ಹಂತದಲ್ಲಿ ಮೈದಾನಕ್ಕಿಳಿದ ಅಂಪೈರ್ ಗಳು ಬಾಂಗ್ಲಾ ಇನ್ನಿಂಗ್ಸ್ ಮುಂದುವರೆಸಲು ನಿರ್ಧರಿಸಿದರು. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಬಾಂಗ್ಲಾಗೆ 16 ಓವರ್ ನಲ್ಲಿ 151ರನ್ ಗಳ ಗುರಿ ನೀಡಲಾಯಿತು. ಈ ಹಂತದಲ್ಲಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಭಾರತ ಆಘಾತ ನೀಡಿತು. 60ರನ್ ಗಳಿಸಿ ಅಪಾಯಕಾರಿಯಾಗಿದ್ದ ಲಿಟನ್ ದಾಸ್ ರನ್ನು ಕೆಎಲ್ ರಾಹುಲ್ ರನೌಟ್ ಮಾಡಿದರು. ಇವರ ಬೆನ್ನಲ್ಲೇ ಮತ್ತೋರ್ವ ಆಟಗಾರ ನಜ್ಮಲ್ ಹುಸೇನ್ ಶಾಂತೋ ಕೂಡ 21 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರು.
ಈ ಹಂತದಲ್ಲಿ ಆರಿಫ್ ಹೊಸೈನ್ ಜೊತೆಗೂಡಿದ ನಾಯಕ ಶಕೀಬ್ ಅಲ್ ಹಸನ್ ಕೊಂಚ ಪ್ರತಿರೋಧ ತೋರಿದರಾದರೂ, ಅರ್ಶ್ ದೀಪ್ ಸಿಂಗ್ ಬೌಲಂಗ್ ನಲ್ಲಿ ಔಟಾಗಿದ್ದು ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಇವರ ಬೆನ್ನಲ್ಲೇ ನಾಯಕ ಶಕೀಬ್ ಕೂಡ 13 ರನ್ ಗಳಿಸಿ ಮತ್ತೆ ಅರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ಇವರ ಬೆನ್ನಲ್ಲೇ 1ರನ್ ಗಳಿಸಿದ್ದ ಯಾಸಿರ್ ಅಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ 6 ರನ್ ಗಳಿಸಿದ್ದ ಮೊಸಾದಕ್ ಹುಸೇನ್ ಕೂಡ ಪಾಂಡ್ಯ ಬೌಲಿಂಗ್ ನಲ್ಲಿ ಔಟಾಗುವುದರೊಂದಿಗೆ ಬಾಂಗ್ಲಾದೇಶಕ್ಕೆ ಸೋಲಿನ ಭೀತಿ ಎದುರಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ನೂರುಲ್ ಹುಸೇನ್ ಮತ್ತು ಟಸ್ಕಿನ್ ಅಹ್ಮದ್ ಮತ್ತೆ ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು.
ಆದರೆ ಭಾರತದ ಸಂಘಟಿತ ಪ್ರಯತ್ನದಿಂದಾಗಿ ಕೊನೆಗೆ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಲು ಸಾಧ್ಯವಾಯಿತು.