ಹೈದರಾಬಾದ್, ಫೆ 22(SM): ಪುಲ್ವಾಮದಲ್ಲಿ ಉಗ್ರರು ಅಟ್ಟಹಾಸ ಮೆರೆದ ಬಳಿಕ ಭಾರತ ಪಾಕಿಸ್ತಾನದೊಂದಿಗೆ ಹಲವು ವ್ಯವಹಾರಗಳನ್ನು ಮೊಟಕುಗೊಳಿಸಲು ಮುಂದಾಗುತ್ತಿದೆ. ಮೇ ತಿಂಗಳಲ್ಲಿ ನಡೆಯುವಂತ ಏಕದಿನ ವಿಶ್ವಕಪ್ ಟೂರ್ನಿ ಆಡಬಾರದೆಂಬ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಮೇ ಅಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಾಲ್ಗೊಳ್ಳುವಿಕೆ ಇನ್ನೂ ಅಂತಿಮವಾಗಿಲ್ಲ. ಇದರ ನಡುವೆ ಐಸಿಸಿ, ಬಿಸಿಸಿಐ ವಿರುದ್ಧ ಖಡಕ್ ನಿರ್ಧಾರ ಕೈಗೊಳ್ಳುತ್ತದೆ ಎಂಬ ಮಾಹಿತಿ ಕೇಳಿ ಬರುತ್ತಿದೆ.
ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಆಡಬೇಕೆ, ಇಲ್ಲವೇ ಎನ್ನುವ ಕುರಿತು ಬಿಸಿಸಿಐ ಇನ್ನೂ ತನ್ನ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಆದರೂ ಪಾಕ್ ತಂಡವನ್ನು ವಿಶ್ವಕಪ್ನಿಂದ ಬ್ಯಾನ್ ಮಾಡಿ ಇಲ್ಲವೇ ನಾವೇ ಟೂರ್ನಿಯಿಂದ ಹಿಂದಕ್ಕೆ ಸರಿಯುವುದಾಗಿ ಪತ್ರವೊಂದು ಸಿದ್ಧಗೊಂಡಿದೆ ಎನ್ನಲಾಗಿದೆ.
ಒಂದು ವೇಳೆ ವಿಶ್ವಕಪ್ನಲ್ಲಿ ಪಾಕ್ ಜೊತೆ ಭಾರತ ಆಡುವುದರಿಂದ ಹಿಂದಕ್ಕೆ ಸರಿದರೆ ಬಿಸಿಸಿಐಯನ್ನು ಐಸಿಸಿ ಬ್ಯಾನ್ ಮಾಡಲಿದೆ ಎನ್ನಲಾಗುತ್ತಿದೆ. ಪಾಕಿಸ್ತಾನವನ್ನು ವಿಶ್ವಕಪ್ನಿಂದ ಬ್ಯಾನ್ ಮಾಡಿ ಎನ್ನುವ ಭಾರತದ ಮನವಿಗೆ ಐಸಿಸಿ ಸ್ಪಂದಿಸುತ್ತದಾ ಅಥವಾ ಭಾರತವೇ ಹಿಂದಕ್ಕೆ ಸರಿಯುತ್ತಾ ಎನ್ನುವುದು ಮುಂದಿನ ವಾರದ ಐಸಿಸಿ ಸಭೆಯ ಬಳಿಕ ತಿಳಿಯಲಿದೆ.