ಮೆಲ್ಬೋರ್ನ್, ನ 13 (DaijiworldNews/SM): ಭಾರೀ ಕುತೂಹಲ ಕೆರಳಿಸಿದ್ದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆ ಮೂಲಕ ಐಸಿಸಿ ಟಿ20ಯಲ್ಲಿ ಎರಡನೇ ಬಾರಿ ಚಾಂಪಿಯನ್ ಆದಂತಾಗಿದೆ. ಮತ್ತೊಂದೆಡೆ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಒಟ್ಟೊಟ್ಟಿಗೆ ಗೆದ್ದುಕೊಂಡ ದಾಖಲೆಯನ್ನು ತನ್ನ ಹೆಸರಲ್ಲಿ ಉಳಿಸಿಕೊಂಡಿದೆ.
ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆಂಗ್ಲ ಬೌಲರ್ ಗಳ ಕಾಡಿದರು.
ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ 15 ಹಾಗೂ ಬಾಬರ್ ಅಜಾಂ 32 ರನ್ ಪೇರಿಸಿದರು. ಮೊಹಮ್ಮದ್ ಹ್ಯಾರಿಸ್ 8, ಶಾನ್ ಮಸೂದ್ 38, ಶದಾಬ್ ಖಾನ್ 20 ರನ್ ಪೇರಿಸಿದ್ದು ಆ ಮೂಲಕ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿದ್ದು ಇಂಗ್ಲೆಂಡ್ ತಂಡಕ್ಕೆ 138 ರನ್ ಗಳ ಗುರಿ ನೀಡಿತ್ತು.
ಇನ್ನು ಪಾಕ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 52 ರನ್ ಗಳ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಇಂಗ್ಲೆಂಡ್ ಪರ ಜೋಸ್ ಬಟ್ಲರ್ 26, ಸಾಲ್ಟ್ 10, ಹ್ಯಾರಿ ಬ್ರೋಕ್ 20, ಮೋಯಿನ್ ಅಲಿ 19 ಹಾಗೂ ಲಿವಿಂಗ್ಸ್ಟೋನ್ ಅಜೇಯ 1 ರನ್ ಗಳಿಸಿದ್ದಾರೆ.
ಪಾಕ್ ಪರ ಬೌಲಿಂಗ್ ನಲ್ಲಿ ಹಾರಿಸ್ ರೌಫ್ ಮೊಹಮ್ಮದ್ ವಾಸೀಂ ತಲಾ 2 ವಿಕೆಟ್, ಶಾಹೀನ್ ಶಾ ಆಫ್ರಿದಿ, ಶಬಾದ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.