ಉಡುಪಿ,ನ 16 (DaijiworldNews/MS): ನೇಪಾಳದಲ್ಲಿ ನಡೆದ ಇಂಡೋ- ನೇಪಾಲ್ ಥ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತ ಜಯ ಸಾಧಿಸಿದ್ದು, ತಂಡದಲ್ಲಿ ಜಿಲ್ಲೆಯ ಮೂವರು ಆಟಗಾರ್ತಿಯರು ಭಾಗವಹಿಸಿ ಉಡುಪಿಗೆ ಹೆಮ್ಮೆಯನ್ನು ತಂದಿದ್ದಾರೆ.
ನವಂಬರ್ 12 ಮತ್ತು 13 ಕ್ಕೆ ನೇಪಾಳದಲ್ಲಿ ಐದು ದೇಶಗಳ ಥ್ರೋಬಾಲ್ ಕ್ರೀಡಾಕೂಟ ನಡೆದಿದೆ. ದೇಶವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ಕರ್ನಾಟಕದ ಮೂವರು ಯುವತಿಯರು ದೇಶಕ್ಕೆ ಗೌರವ ತಂದು ಕೊಡುವ ಕೆಲಸ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂವರು ಆಟಗಾರ್ತಿಯರು ಭಾರತ ದೇಶವನ್ನು ಪ್ರತಿನಿಧಿಸಿದ್ದು ಕರಾವಳಿಯ ಹೆಮ್ಮೆ.ಕಾಪು ತಾಲೂಕು ಶಿರ್ವದ ಶಮಿತಾ ಮತ್ತು ಧನ್ಯ, ಮುದರಂಗಡಿಯ ರಶ್ಮಿ ಥ್ರೋಬಾಲ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡ ಹೆಮ್ಮೆಯ ಆಟಗಾರ್ತಿಯರು. ಇವರಲ್ಲಿ ಶಮಿತಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ನೇರವಾಗಿ ಆಯ್ಕೆಯಾದರು.
ಇಂಡೋ ನೇಪಾಳ ಚಾಂಪಿಯನ್ಶಿಪ್ ನಲ್ಲಿ ಭಾರತ ಶ್ರೀಲಂಕಾ ಬಾಂಗ್ಲಾದೇಶ ನೇಪಾಳ ಮತ್ತು ಮಲೇಶಿಯಾ ತಂಡಗಳು ಭಾಗವಹಿಸಿದ್ದವು. ಭಾರತ ಚಿನ್ನದ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದೆ.ವಿನಾಯಕ ಮತ್ತು ರುದ್ರೇಶ್ ತಂಡಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದರು.
ಪೈನಲ್ ಪಂದ್ಯಾಟದಲ್ಲಿ ಮೊದಲ ಸೆಟ್ನಲ್ಲಿ ಭಾರತ 20 ಮತ್ತು ನೇಪಾಳ 25 ಅಂಕಗಳಿಂದ ಮುನ್ನಡೆಯನ್ನು ಸಾಧಿಸಿತ್ತು. 2ನೇ ಸೆಟ್ನಲ್ಲಿ ಭಾರತ 25 ಮತ್ತು ನೇಪಾಳ 15 ಮತ್ತು ಅಂತಿಮ ಸೆಟ್ನಲ್ಲಿ ಭಾರತ 25 ಮತ್ತು ನೇಪಾಳ 18 ಅಂಕಗಳಿಂದ ಭಾರತ ತ್ರೋಬಾಲ್ ತಂಡ ಜಯಭೇರಿಯನ್ನು ಬಾರಿಸಿತು.