ಮುಂಬೈ, ನ 30 (DaijiworldNews/DB): ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾವು ಪ್ರದರ್ಶನಕ್ಕಿಂತಲೂ ರಿಷಬ್ ಪಂತ್ ವಿಚಾರದಲ್ಲಿಯೇ ಹೆಚ್ಚು ಸುದ್ದಿ ಮಾಡುತ್ತಿದೆ. ಕಳಪೆ ಫಾರ್ಮ್ನಲ್ಲಿದ್ದರೂ ಪಂತ್ಗೆ ಅವಕಾಶ ನೀಡುತ್ತಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಈ ನಡುವೆ ನನಗಿನ್ನೂ 24 ವರ್ಷ ವರ್ಷ ಎಂದು ರಿಷಬ್ ಪಂತ್ ಆಡಿರುವ ಮಾತು ಸದ್ದು ಮಾಡುತ್ತಿದೆ.
ಹೌದು ಕ್ರೈಸ್ಟ್ ಚರ್ಚ್ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೂ ಮೊದಲು ವಿಶ್ಲೇಷಕ ಹರ್ಷ ಭೋಗ್ಲೆ ಅವರು ರಿಷಬ್ ಪಂತ್ ಅವರನ್ನು ಸಂದರ್ಶಿಸಿದ್ದಾರೆ. ಈ ಸಂದರ್ಶನದಲ್ಲಿ ಪಂತ್ ಪ್ರದರ್ಶನದ ಕುರಿತು ಕೇಳಿ ಬರುತ್ತಿರುವ ಮಾತುಗಳ ಕುರಿತು ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ರಿಷಬ್ ಪಂತ್, ದಾಖಲೆಗಳ ಕುರಿತು ನನಗೆ ಯಾವುದೇ ನಂಬಿಕೆ ಇಲ್ಲ. ಟೆಸ್ಟ್ ಕ್ರಿಕೆಟ್, ವೈಟ್ ಬಾಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನನಿಗಿನ್ನೂ 24 ವರ್ಷ. ಹೋಲಿಕೆ ಮಾಡುವುದಾದರೆ 31-32 ವರ್ಷದವನಾದಾಗ ಮಾಡಿ ಎಂದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿಯೂ ಪಂತ್ ಈ ವರ್ಷ ಅಷ್ಟೇನು ಉತ್ತಮ ಪ್ರದರ್ಶನ ತೋರಿಸಿಲ್ಲ. ಇನ್ನು ಏಷ್ಯಾಕಪ್ನಿಂದಲೂ ಕಳಪೆ ಫಾರ್ಮ್ನಲ್ಲಿರುವ ಪಂತ್ಗೆ ಅವಕಾಶ ಪದೇ ಪದೇ ಲಭಿಸುತ್ತಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಂಜು ಸ್ಯಾಮ್ಸನ್ರಂತ ಪ್ರತಿಭೆಗಳ ದಂಡು ಇದ್ದರೂ ಅವರನ್ನು ಬಿಟ್ಟು ಉತ್ತಮ ಪ್ರದರ್ಶನ ತೋರದವರಿಗೆ ಅವಕಾಶ ಯಾಕೆಂಬುದು ಅಭಿಮಾನಿಗಳ ಪ್ರಶ್ನೆ.