ನವದೆಹಲಿ, ಡಿ 06 (DaijiworldNews/DB): ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ. ಇನ್ನು ಹಿರಿಯ ಮಹಿಳಾ ತಂಡದ ಮಾಜಿ ಮುಖ್ಯ ತರಬೇತುದಾರ ರಮೇಶ್ ಪೊವಾರ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.
ಬಿಸಿಸಿಐನ ಪುನಾರಚನೆ ಆಲೋಚನೆಯ ಭಾಗವಾಗಿ ಈ ನೇಮಕ ಮಾಡಲಾಗಿದೆ. ಡಿಸೆಂಬರ್ 9ರಿಂದ ಮುಂಬೈನಲ್ಲಿ ಆರಂಭಗೊಳ್ಳುವ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಐ ಸರಣಿಯನ್ನು ಕಾನಿಟ್ಕರ್ ಮುನ್ನಡೆಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ಇನ್ನು ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕಾನಿಟ್ಕರ್, ಇದೊಂದು ಹೆಮ್ಮೆಯ ವಿಷಯ. ಭಾರತ ಮಹಿಳಾ ತಂಡವನ್ನು ಉತ್ತಮವಾಗಿ ಮುನ್ನಡೆಸಿ ಅದ್ಬುತ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದೇನೆ. ಸವಾಲಿಗೆ ತಂಡ ಸಿದ್ದವಾಗಿದೆ ಎಂದಿದ್ದಾರೆ.