ನವದೆಹಲಿ, ಡಿ 08 (DaijiworldNews/DB): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಹೊಸ ದಾಖಲೆಯೊಂದನ್ನು ಮಾಡಿ ಸುದ್ದಿಯಾಗಿದ್ದಾರೆ. 500 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಅವರದಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದ್ದಾರೆ.
3 ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು ಸೋಲಿಸಿತಾದರೂ, ರೋಹಿತ್ ಶರ್ಮಾರ ದಾಖಲೆಯಿಂದಾಗಿ ತಂಡ ಸುದ್ದಿಯಾಯಿತು. ಬೆರಳಿನ ಗಾಯದಿಂದಾಗಿ ಕೊನೆ ಕ್ಷಣದಲ್ಲಿ ಬ್ಯಾಟಿಂಗ್ಗೆ ಮರಳಿದ ರೋಹಿತ್ ಶರ್ಮ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದರಾದರೂ, ಗೆಲುವು ಸಾಧ್ಯವಾಗಲಿಲ್ಲ. ಆದರೆ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 51 ರನ್ಗಳ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು. ಈ ಸಿಕ್ಸರ್ನೊಂದಿಗೆ ಅವರ ಸಿಕ್ಸರ್ ಸಂಖ್ಯೆ 500 ಆಗಿದ್ದು, 500 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದರು.
ರೋಹಿತ್ ಶರ್ಮಾ ತಮ್ಮ 428ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, 447ನೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 500 ಸಿಕ್ಸರ್ ಪೂರೈಸಿದ್ದ ಗೇಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲಿಗರಾಗಿದ್ದಾರೆ. ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟು 553 ಸಿಕ್ಸರ್ ಸಿಡಿಸಿದ್ದಾರೆ.