ನವದೆಹಲಿ, ಡಿ 10 (DaijiworldNews/DB): ಭಾರತೀಯ ಒಲಿಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಓಟಗಾರ್ತಿ ಪಿ.ಟಿ. ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಐಒಎಯ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
58 ವರ್ಷದ ಪಿ.ಟಿ. ಉಷಾ ಅವರು ಮಹಾರಾಜ ಯಾದವೀಂದ್ರ ಸಿಂಗ್ (1938-1960ರ ಅವಧಿಯಲ್ಲಿ) ಬಳಿಕ ಈ ಹುದ್ದೆ ಅಲಂಕರಿಸಿದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇನ್ನು ಹಿರಿಯ ಉಪಾಧ್ಯಕ್ಷರಾಗಿ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್ಆರ್ಎಐ) ಅಜಯ್ ಪಟೇಲ್, ಉಪಾಧ್ಯಕ್ಷರಾಗಿ ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ಡಿಯೋ,
ಖಜಾಂಚಿಯಾಗಿ ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಅಧ್ಯಕ್ಷ ಸಹದೇವ್ ಯಾದವ್, ಜಂಟಿ ಕಾರ್ಯದರ್ಶಿಯಾಗಿ (ಪುರುಷ) ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಮತ್ತು ಮಾಜಿ ಗೋಲ್ಕೀಪರ್ ಕಲ್ಯಾಣ್ ಚೌಬೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡ ನಿವೃತ್ತ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಿತು.
ಪಿ. ಟಿ. ಉಷಾ ಅವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆಯಾಗಿ ಮಿಂಚಿದವರು.1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನ 400 ಮೀ. ಹರ್ಡಲ್ಸ್ ಫೈನಲ್ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಸುಮಾರು ಎರಡು ದಶಕಗಳ ಕ್ರೀಡಾ ಕ್ಷೇತ್ರದ ಸಾಧನೆ ಬಳಿಕ 2000ರಲ್ಲಿ ಕ್ರೀಡೆಯಿಂದ ನಿವೃತ್ತರಾದವರು.