ಕತಾರ್, ಡಿ 11 (DaijiworldNews/DB): ಕತಾರ್ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಶನಿವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪೋರ್ಷುಗಲ್ ತಂಡದ ಫಿಫಾ ವಿಶ್ವಕಪ್ ಪಯಣವನ್ನು ಕೊನೆಗೊಳಿಸಿದೆ. ತಮ್ಮ ತಂಡದ ಸೋಲಿನ ದುಃಖ ತಡೆಯಲಾರದೆ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರಾದರು.
ಕಣ್ಣೀರಿನೊಂದಿಗೇ ಮೈದಾನಕ್ಕೆ ವಿದಾಯ ಹೇಳಿದ ರೊನಾಲ್ಡೊ ಅವರ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಸಂಖ್ಯಾತ ಅಭಿಮಾನಿಗಳೂ ಭಾವುಕರಾಗುವಂತೆ ಮಾಡಿತು. ಫುಟ್ಬಾಲ್ನಲ್ಲಿ ಇತಿಹಾಸ ನಿರ್ಮಿಸಿರುವ ಕ್ರಿಸ್ಟಿಯಾನೊ ಅವರಿಗೆ ಕೇವಲ ಪೋರ್ಚುಗಲ್ ಮಾತ್ರವಲ್ಲದೆ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.
ನಾಯಕನಾದರೂ ಕ್ರಿಸ್ಟಿಯಾನೊ ಅವರನ್ನು ಈ ಪಂದ್ಯದಿಂದ ಹೊರಗಿರಿಸಿ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಗೊನ್ಕಾಲೊ ರಾಮೋಸ್ ಅವರನ್ನು ಪಂದ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಈ ಪಂದ್ಯವನ್ನು ಗೆಲ್ಲಲು ಪೋರ್ಚುಗಲ್ ತಂಡಕ್ಕೆ ಸಾಧ್ಯವಾಗಲಿಲ್ಲ. ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ಸಹಾಯದಿಂದ ಮೊರಾಕ್ಕೊ ಸೆಮಿಫೈನಲ್ ಪ್ರವೇಶಗೈದಿದೆ. ಸೆಮೀಸ್ ತಲುಪಿದ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಮೊರಾಕ್ಕೊ ಪಾತ್ರವಾಯಿತು.