ಹೈದರಾಬಾದ್, ಮಾ 02(SM): ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯಾ-ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಭಾರತ ಹೀನಾಯವಾಗಿ ಸೋಲನ್ನು ಕಂಡಿದೆ. ಸರಣಿ ಕಾಂಗರೂಗಳ ವಶವಾಗಿದೆ. ಇದೀಗ ಇಂದಿನಿಂದ ಏಕದಿನ ಸರಣಿ ಆರಂಭಗೊಳ್ಳುತ್ತಿದೆ. ಟಿ-೨೦ಯಲ್ಲಿ ಉಂಟಾದ ಮುಖಭಂಗವನ್ನು ಅಳಿಸಲು ಭಾರತಕ್ಕೆ ಇದೊಂದು ವೇದಿಕೆಯಾಗಿದೆ.
ಇಂದಿನ ಆರಂಭವಾದ ಏಕದಿನ ಸರಣಿಯನ್ನು ಕೊಹ್ಲಿ ಪಡೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಈಗಾಗಲೇ ಇನ್ನಿಲ್ಲದ ಕಸರತ್ತುಗಳನ್ನು ಟೀಂ ಇಂಡಿಯಾ ನಡೆಸಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಸರಣಿ ಹೇಳುವಷ್ಟು ಸುಲಭವಿಲ್ಲ. ತವರಿನಲ್ಲಿ ಸರಣಿ ನಡೆಯುತ್ತಿದ್ದರೂ, ಕಾಂಗರೂಗಳಿಗೆ ಇಲ್ಲಿನ ಪಿಚ್ ಚೆನ್ನಾಗಿಯೇ ತಿಳಿದಿದೆ. ಮಾತ್ರವಲ್ಲದೇ, ನಮ್ಮ ಆಟಗಾರರ ವೈಫಲ್ಯವನ್ನು ಕಂಡು ಹಿಡಿಯಲು ಅವರು ಶಕ್ತರಾಗಿದ್ದಾರೆ. ಇದೇ ಕಾರಣದಿಂದ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ಮಧ್ಯಾಹ್ನ ಆರಂಭಗೊಳ್ಳುತ್ತದೆ. ಟಿ-20 ಸರಣಿಯಲ್ಲಿ ಸೋಲು ಕಂಡಿರುವ ಭಾರತ ತಂಡ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಲೇ ಬೇಕಾಗಿದೆ. ಇಂದಿನ ಪಂದ್ಯದಲ್ಲಿ ಆಸೀಸ್ ತಂಡವನ್ನ ಸೋಲಿಸಲು ಕೊಹ್ಲಿ ಪಡೆ ಸಿದ್ದಗೊಂಡಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸದ್ಯದಲ್ಲೇ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನ್ಮೆಂಟ್ಗೂ ಮುನ್ನ ನಡೆಯುತ್ತಿರುವ ಈ ಸರಣಿ ಭಾರತ ತಂಡದ ನಾಲ್ವರು ಆಟಗಾರರಿಗೆ ಮಹತ್ವದ್ದೆನಿಸಿದೆ. ವಿಶ್ವಕಪ್ ಸರಣಿಗೆ ಆಯ್ಕೆಯಾಗುವ 15 ಜನರ ತಂಡದಲ್ಲಿ 2 ಸ್ಥಾನಕ್ಕಾಗಿ ನಾಲ್ವರು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್, ರಿಷಭ್ ಪಂತ್, ವಿಜಯ್ ಶಂಕರ್ ಮತ್ತು ಸಿದ್ದಾರ್ಥ್ ಕೌಲ್ ಅಂತಿಮ 15 ಜನರ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ. ಆದರೆ ಇವರಿಗೆ ತೀವ್ರ ಒತ್ತಡ ಇದ್ದು, ಅವಕಾಶ ಸಿಕ್ಕ ಪಂದ್ಯದಲ್ಲಿ ಆಸೀಸ್ ವಿರುದ್ಧದ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.