ನವದೆಹಲಿ, ಡಿ 23 (DaijiworldNews/DB): ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಹುದ್ದೆಗೆ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹವಾಗ್ ಅವರೂ ಅರ್ಜಿ ಸಲ್ಲಿಸಿದ್ದಾರೆ!
ಅಭ್ಯರ್ಥಿಗಳ ಆಯ್ಕೆಯ ಅರ್ಜಿ ಪರಿಶೀಲಿಸಿದಾಗ ತೆಂಡುಲ್ಕರ್, ಧೋನಿ, ಸೆಹವಾಗ್ ಅರ್ಜಿಯೂ ಬಂದಿರುವುದನ್ನು ನೋಡಿ ಬಿಸಿಸಿಐ ಅಧಿಕಾರಿಗಳೇ ಚಕಿತರಾಗಿದ್ದಾರೆ. ಅಷ್ಟಕ್ಕೂ ಇದು ನಿಜವಾಗಿಯೂ ಸಚಿನ್, ಧೋನಿ, ಸೆಹವಾಗ್ ಸಲ್ಲಿಸಿರುವ ಅರ್ಜಿಯಲ್ಲ, ಯಾರೋ ತಮಾಷೆಗಾಗಿ ಅವರ ಹೆಸರಿನಲ್ಲಿ ಅರ್ಜಿ ಹಾಕಿರಬೇಕೆಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿಗೆ ಸದಸ್ಯರಾಗ ಬಯಸುವವರಿಂದ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಇದೀಗ ಅರ್ಜಿ ಸಲ್ಲಿಕೆ ದಿನಾಂಕ ಅಂತಿಮಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಧಿಕಾರಿಗಳು ಗುರುವಾರ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಮತ್ತು ವೀರೇಂದ್ರ ಸೆಹವಾಗ್ ಹೆಸರಿನಲ್ಲಿ ಅರ್ಜಿಗಳು ಬಂದಿರುವುದನ್ನು ಕಂಡು ಅಧಿಕಾರಿಗಳು ತಬ್ಬಿಬ್ಬಾದರು. ಪಾಕಿಸ್ಥಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಅವರ ಹೆಸರಿನಲ್ಲಿಯೂ ಅರ್ಜಿ ಸಲ್ಲಿಕೆಯಾಗಿತ್ತು.
ಹುದ್ದೆಗೆ ಸುಮಾರು 600ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ಟಾರ್ ಕ್ರಿಕೆಟಿಗರ ಹೆಸರಿನಲ್ಲಿ ಯಾರೋ ಬೇಕಂತಲೇ ಅರ್ಜಿ ಸಲ್ಲಿಸಿದ್ದು, ಇದು ನಕಲಿಯಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅರ್ಜಿಗಳನ್ನು ಕ್ರಿಕೆಟ್ ಸಲಹಾ ಸಮಿತಿಯು ಪರಿಶೀಲಿಸಿ ಹತ್ತು ಮಂದಿಯನ್ನು ಆಯ್ಕೆ ಮಾಡಿ, ಅಂತಿಮವಾಗಿ ಐವರನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ.