ನವದೆಹಲಿ, ಡಿ 26 (DaijiworldNews/DB): ಕಳಪೆ ಫಾರ್ಮ್ನಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕ್ರಿಕೆಟಿಗ ಕೆ.ಎಲ್. ರಾಹುಲ್ ಕೊನೆಗೂ ಮೌನ ಮುರಿದಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಅವರು, ಸುಧಾರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಬಾಂಗ್ಲಾದಿಂದ ಭಾರತಕ್ಕೆ ಆಗಮಿಸಿ ವಿಶ್ರಾಂತಿ ಮೂಡ್ನಲ್ಲಿದೆ. ಆದರೆ ಸ್ಟಾರ್ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಈ ಸರಣಿಯ ನಾಯಕನಾಗಿದ್ದ ಕೆ.ಎಲ್. ರಾಹುಲ್ ಅವರ ಕಳಪೆ ಫಾರ್ಮ್ ಬಿಸಿಸಿಐಗೆ ತಲೆನೋವು ತಂದಿದೆ. ಜೊತೆಗೆ ಕೆ.ಎಲ್. ರಾಹುಲ್ ಅಂತೂ ಟೀಕಾಕಾರರ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಟೀಕೆಯನ್ನು ಧನಾತ್ಮಕವಾಗಿ ತೆಗೆದುಕೊಂಡಿರುವ ರಾಹುಲ್, ತನ್ನಿಂದ ಆಗಿರುವ ಪ್ರದರ್ಶನ ಲೋಪವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೇ ಒಬ್ಬ ಆಟಗಾರನಿಗೆ ಮೈದಾನದಲ್ಲಿ ಎದುರಾಗುವ ಸಂಕಷ್ಟಗಳ ಕುರಿತು ಮಾತನಾಡಿ ಟೀಕಾಕಾರರ ಬಾಯ್ಮುಚ್ಚುವ ಪ್ರಯತ್ನವನ್ನೂ ಮಾಡಿದ್ದಾರೆ.
ನಾನು ಕ್ರಿಕೆಟ್ ವೃತ್ತಿ ಬದುಕು ಆರಿಸಿಕೊಂಡಾಗಿನಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ದೀರ್ಘಕಾಲ ನಮ್ಮೊಂದಿಗೆ ಯಾವುದೂ ಉಳಿಯುವುದಿಲ್ಲ. ಆದರೆ ಅದನ್ನು ಮರೆತು ಹೊಸ ಉತ್ಸಾಹದೊಂದಿಗೆ ಮುಂದಿನದಕ್ಕೆ ಅಣಿಯಾಗಬೇಕು. ಒಬ್ಬ ಆಟಗಾರ ಮೂರೂ ಸ್ವರೂಪದ ಕ್ರಿಕೆಟ್ಗಳನ್ನು ಆಡುವಾಗ ಒಂದರಿಂದ ಇನ್ನೊಂದಕ್ಕೆ ಬದಲಾವಣೆಗೊಳ್ಳುವುದು ಕಷ್ಟವೇ. ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಕಳೆದ ಹಲವು ಸಮಯದಿಂದ ಆಡಿರಲಿಲ್ಲವಾದ್ದರಿಂದ ಅದಕ್ಕೆ ಹೊಂದಿಕ್ಕೊಳ್ಳಲು ಸಮಯ ಬೇಕಾಗುತ್ತದೆ ಎಂದರು.
ಈ ಸರಣಿಯಲ್ಲಿ ನಾನು ಉತ್ತಮ ಪ್ರದರ್ಶನ ತೋರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನಿಂದ ಸಾಧ್ಯವಾದಷ್ಟು ಆಡಿದ್ದೇನೆ, ಅದು ಕೆಲಸ ಮಾಡಲಿಲ್ಲ ಎಂಬುದಷ್ಟೆ ಹೇಳಬಲ್ಲ. ಇನ್ನು ವಿಕೆಟ್ ಪ್ರತಿಯೊಬ್ಬ ಆಟಗಾರನೂ ಕಳೆದುಕೊಳ್ಳಲೇಬೇಕು. ಹೀಗಾಗಿ ಟೀಕೆಗಳಿಗೆ ಕುಂದುವುದಿಲ್ಲ, ಸಕಾರಾತ್ಮಕವಾಗಿ ತೆಗೆದುಕೊಂಡು ಮುಂದಿನದನ್ನು ಯೋಚಿಸುತ್ತೇನೆ ಎಂದವರು ಈ ವೇಳೆ ಭಾವುಕರಾದರು.