ನವದೆಹಲಿ, ಡಿ 28 (DaijiworldNews/DB): ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಧೋನಿ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಉಡುಗೊರೆಯಾಗಿ ನೀಡಿರುವ ತಮ್ಮ ಸಹಿಯುಳ್ಳ ಅರ್ಜೇಂಟೀನಾ ತಂಡದ ಜೆರ್ಸಿ.
ಹೌದು. ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ನಲ್ಲಿ ಅರ್ಜೇಂಟಿನಾ ತಂಡವನ್ನು ಚಾಂಪಿಯನ್ ಆಗಿಸಿದ ಮೆಸ್ಸಿಗೆ ವಿಶ್ವಾದ್ಯಂತ ಅಭಿಮಾನಿಗಳ ದೊಡ್ಡ ದಂಡೇ ಇದೆ. ಕೇವಲ ಅಜೆಂಟಿನಾ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳ ಮೆಸ್ಸಿ ಅಭಿಮಾನಿಗಳು ಅಲ್ಲಲ್ಲಿ ಪೋಸ್ಟರ್ ಅಂಟಿಸುವ ಮೂಲಕ ಮೆಸ್ಸಿಯನ್ನು ಕೊಂಡಾಡಿದ್ದಾರೆ.
ವಿಶೇಷವೆಂದರೆ ಧೋನಿ ಮಗಳು ಜೀವಾ ಕೂಡಾ ಮೆಸ್ಸಿಯ ಪುಟ್ಟ ಅಭಿಮಾನಿ. ತಮ್ಮ ಪುಟಾಣಿ ಅಭಿಮಾನಿಯನ್ನು ಮುದ್ದಿನಿಂದ ಮಾತನಾಡಿಸಿರುವ ಮೆಸ್ಸಿ ಆಕೆಗೆ ಬೆಲೆ ಕಟ್ಟಲಾಗದ ಉಡುಗೊರೆ ನೀಡಿ ಹಾರೈಸಿದ್ದಾರೆ. ತಮ್ಮ ಸಹಿ ಹಾಕಿದ ಅರ್ಜೇಂಟಿನಾ ತಂಡದ ಜೆರ್ಸಿಯನ್ನು ಜೀವಾಳಿಗೆ ಉಡುಗೊರೆಯಾಗಿ ಮೆಸ್ಸಿ ನೀಡಿದ್ದಾರೆ. ಅಲ್ಲದೆ ತಮ್ಮ ಸಹಿಯೊಂದಿಗೆ ಪಾರಾ ಜೀವಾ (ಜೀವಾಳಿಗಾಗಿ) ಎಂದೂ ಮೆಸ್ಸಿ ಬರೆದಿದ್ದಾರೆ.
ಇನ್ನು ನೆಚ್ಚಿನ ಆಟಗಾರ ಮೆಸ್ಸಿ ನೀಡಿರುವ ಜೆರ್ಸಿ ತೊಟ್ಟು ಪುಟಾಣಿ ಜೀವಾ ಸಂಭ್ರಮಿಸಿದ್ದಾರೆ. ಈ ಫೋಟೋವನ್ನು ಆಕೆಯ ತಾಯಿ ಸಾಕ್ಷಿ ಧೋನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಂದೆಯಂತೆಯೇ ಮಗಳು ಎಂಬ ಶೀರ್ಷಿಕೆ ನೀಡಿದ್ದಾರೆ. ಧೋನಿ ಕ್ರಿಕೆಟ್ ಆಟಗಾರರಾದರೂ ಫುಟ್ಬಾಲ್ ಮೇಲೆ ಅವರಿಗೆ ಕ್ರೇಜ್ ಹೆಚ್ಚಿದೆ.