ಆಸ್ಟ್ರೇಲಿಯಾ, ಡಿ 29 (DaijiworldNews/DB): ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಗ್ಲೆನ್ ಮ್ಯಾಕ್ಸುವೆಲ್ ಹೆಸರು ದೊಡ್ಡದು. ಸ್ಟಾರ್ ಆಟಗಾರರಾದ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚಿಗೆ ನಡೆದ ಘಟನೆಯೊಂದರಲ್ಲಿ ಗ್ಲೆನ್ ಬಹುದೊಡ್ಡ ಆಘಾತವೊಂದನ್ನು ಎದುರಿಸಿದ್ದಾರೆ. ಇದರಲ್ಲಿ ನನ್ನ ಕಾಲು ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಗ್ಲೆನ್ ಹೇಳಿದ್ದಾರೆ.
ಕಳೆದ ತಿಂಗಳು ಸ್ನೇಹಿತನ ಬರ್ತ್ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಸಿಬಿ ಆಲ್ರೌಂಡರ್ ತಮ್ಮ ಕಾಲು ಮುರಿದುಕೊಂಡಿದ್ದರು. ಅಚಾನಕ್ ಆಗಿ ಕಾಲಿಗೆ ಗಂಭೀರ ಗಾಯವಾಗಿತ್ತು. ಇದರಿಂದ ಅವರು ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿದುದಲ್ಲದೆ, ಮುಂದಿನ ಐಪಿಎಲ್ನಲ್ಲಿ ಆಡುವುದೂ ಅನುಮಾನವಾಗಿದೆ.
ಇನ್ನು ಈ ಘಟನೆ ಬಗ್ಗೆ ಮಾತನಾಡಿದ ಮ್ಯಾಕ್ಸುವೆಲ್, ನನ್ನ ವೃತ್ತಿ ಜೀವನವೇ ಮುಗಿದು ಹೋಯಿತು ಎಂದುಕೊಂಡೆ. ಕಾಲು ಕಳೆದುಕೊಂಡೆ ಎಂದೇ ಆ ಕ್ಷಣದಲ್ಲಿ ಭಯವಾಯಿತು ಎಂದರು.
ನಡೆಯುವುದನ್ನು ನಾನು ಮತ್ತೆ ಕಲಿತುಕೊಳ್ಳಬೇಕಾದ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಕಾಲಿನ ಪ್ರತಿ ಅಸ್ಥಿರಜ್ಜು ಹರಿದಿದ್ದರಿಂದ ಈ ಸ್ಥಿತಿಯಲ್ಲಿದ್ದೇನೆ. ಸದ್ಯ ಚೇತರಿಸಿಕೊಳ್ಳುತ್ತಿದ್ದು, ಆರಾಮದಾಯಕವಾಗಿ ನಡೆಯಲು ಪ್ರಾರಂಭಿಸುತ್ತಿದ್ದೇನೆ ಎಂದಿದ್ದಾರೆ.
ಪತ್ನಿ ವಿನ್ನಿ ಕಳೆದೊಂದೂವರೆ ತಿಂಗಳಿನಿಂದ ನನ್ನ ನರ್ಸ್ ಆಗಿ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಅವಳ ಬೆಂಬಲದಿಂದ ನಾನು ಶೀಘ್ರ ವೃತ್ತಿ ಜೀವನಕ್ಕೆ ಮರಳಬಹುದೆಂಬ ವಿಶ್ವಾಸವಿದೆ ಎಂದೂ ಹೇಳಿಕೊಂಡಿದ್ದಾರೆ.