ಬ್ರೆಸಿಲಿಯಾ, ಡಿ 30 ( DaijiworldNews/MS): ವಿಶ್ವ ಫುಟ್ಬಾಲ್ ನ ಸಾರ್ವಕಾಲಿಕ ಆಟಗಾರ , ಬ್ರೆಜಿಲ್ಗೆ 3 ವಿಶ್ವಕಪ್ಗಳನ್ನು ತಂದುಕೊಟ್ಟಿದ್ದ, ಪ್ರಪಂಚದಾದ್ಯಂತದ ಫುಟ್ಬಾಲ್ ಅಭಿಮಾನಿಗಳ ಸ್ಫೂರ್ತಿಯಾಗಿದ್ದ ಶ್ರೇಷ್ಠ ಫುಟ್ಬಾಲ್ ಆಟಗಾರ ಪೀಲೆ (ಎಡ್ಸನ್ ಅರಾಂಟೆಸ್ ಡು ನಾಸ್ಸಿಮೆಂಟೊ) 82 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾಲೊದಲ್ಲಿನ ಐನ್ಸ್ಟೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂರು ವಿಶ್ವಕಪ್ಗಳನ್ನು ಗೆದ್ದ ಇತಿಹಾಸದಲ್ಲಿ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ (1958, 1962 ಮತ್ತು 1970), ಪೀಲೆ ಆವರಿಗಿತ್ತು. ಅವರು 1977ರಲ್ಲಿ ನಿವೃತ್ತರಾಗುವ ಮೊದಲು 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಕ್ರೀಡೆಯಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದರು.
ಅಕ್ಟೋಬರ್ 23, 1940 ರಂದು ಮಿನಾಸ್ ಗೆರೈಸ್ ಪಟ್ಟಣವಾದ ಟ್ರೆಸ್ ಕೊರಾಸ್ ನಲ್ಲಿ ಜನಿಸಿದ್ದ ಪೀಲೆ ತನ್ನ ತಂದೆಯಿಂದ ಈ ಫುಟ್ಬಾಲ್ ಆಟವನ್ನು ಕಲಿತಿದ್ದರು.