ನವದೆಹಲಿ, ಡಿ 31 (DaijiworldNews/DB): ಈ ವರ್ಷದ ಅತ್ಯುತ್ತಮ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದೆ. ನಿನ್ನೆಯಷ್ಟೇ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಅವರೂ ಬಿಸಿಸಿಐ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇಂದು 2022ನೇ ಇಸವಿಯ ಕೊನೆಯ ದಿನವಾಗಿದ್ದು, ಇದೇ ದಿನ ಬಿಸಿಸಿಐ ವರ್ಷದ ಅತ್ಯುತ್ತಮ ಆಟಗಾರರ ಪಟ್ಟಿಯನ್ನು ಟ್ವೀಟ್ ಮೂಲಕ ಪ್ರಕಟಿಸಿದೆ. ಜಸ್ಪ್ರೀತ್ ಬುಮ್ರಾ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದರೆ, ರಿಷಬ್ ಪಂತ್ ಅತಿ ಹೆಚ್ಚು ರನ್ ಗಳಿಸಿದ್ದಾರೆ ಎಂದು ಬಿಸಿಸಿಐ ಶ್ಲಾಘಿಸಿದೆ. 7 ಟೆಸ್ಟ್ಗಳ 12 ಇನ್ನಿಂಗ್ಸ್ಗಳಲ್ಲಿ 62 ಸರಾಸರಿಯಲ್ಲಿ 680 ರನ್, 4 ಶತಕ ಹಾಗೂ 2 ಅರ್ಧ ಶತಕ ಪಂತ್ ಸಾಧನೆಯಾದರೆ, 5 ಟೆಸ್ಟ್ಗಳಲ್ಲಿ 20 ಸರಾಸರಿಯಲ್ಲಿ 22 ವಿಕೆಟ್ ಪಡೆದಿರುವುದು ಬುಮ್ರಾ ಸಾಧನೆ. ಬುಮ್ರಾ 2 ಬಾರಿ 5 ವಿಕೆಟ್ ಪಡೆದಿದ್ದು, 24 ರನ್ಗಳಿಗೆ 5 ವಿಕೆಟ್ ಬೀಳಿಸಿದ್ದು, ಅವರ ಸಾಧನೆಯ ಅದ್ಬುತಗಳಲ್ಲೊಂದು ಎಂದು ಬಿಸಿಸಿಐ ಹೇಳಿದೆ.
ಇನ್ನು ರಿಷಬ್ ಪಂತ್ ಬಳಿಕ 5 ಟೆಸ್ಟ್ಗಳ 8 ಇನ್ನಿಂಗ್ಸ್ಗಳಲ್ಲಿ 422 ರನ್, 4 ಅರ್ಧ ಶತಕ ಗಳಿಸಿ ಶ್ರೇಯಸ್ ಅಯ್ಯರ್ ಎರಡನೇ ಸ್ಥಾನದಲ್ಲಿ, 5 ಟೆಸ್ಟ್ಗಳಲ್ಲಿ 409 ರನ್, ಒಂದು ಶತಕ ಮತ್ತು 3 ಅರ್ಧ ಶತಕಗಳೊಂದಿಗ ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿ ಇದ್ದಾರೆ. 328 ರನ್ಗಳೊಂದಿಗೆ ರವೀಂದ್ರ ಜಡೇಜಾ ನಾಲ್ಕನೇ ಸ್ಥಾನ ಮತ್ತು 270 ರನ್ಗಳೊಂದಿಗೆ ಆರ್. ಅಶ್ವಿನ್ 5 ನೇ ಸ್ಥಾನದಲ್ಲಿದ್ದಾರೆ. ವೇಗಿ ಮೊಹಮ್ಮದ್ ಶಮಿ 13 ವಿಕೆಟ್ , ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ 11-11 ವಿಕೆಟ್ ಪಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.