ನವದೆಹಲಿ, ಜ 05 (DaijiworldNews/DB): ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಅದರಂತೆ 2023ರ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ವಿಶೇಷವೆಂದರೆ, ಏಷ್ಯಾಕಪ್ನಲ್ಲಿ ಭಾಗವಹಿಸುವ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಬದ್ದವೈರಿ ತಂಡಗಳು ಒಂದೇ ಗುಂಪಿನಲ್ಲಿವೆ!
2023ರ ಏಷ್ಯಾಕಪ್ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಟ್ವೀಟರ್ ಮುಖಾಂತರ ಇಂದು ಪ್ರಕಟಿಸಿದ್ದು, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯಾಕಪ್ನಲ್ಲಿ ಈ ಬಾರಿ ಆರು ತಂಡಗಳು ಭಾಗವಹಿಸಲಿದ್ದು, ಈ ತಂಡಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು, ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
ಗ್ರೂಪ್ 1ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಇನ್ನು ಅರ್ಹತಾ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡ ಭಾರತ ಮತ್ತು ಪಾಕಿಸ್ತಾನ ತಂಡವಿರುವ ಒಂದನೇ ಗುಂಪಿನಲ್ಲಿ ಸ್ಥಾನ ಪಡೆಯಲಿದೆ. ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಅಪಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿವೆ. ಏಷ್ಯಾಕಪ್ ಪಂದ್ಯವು ಈ ಬಾರಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಒಟ್ಟು13 ಪಂದ್ಯಗಳು ನಡೆಯುತ್ತವೆ.
ಇನ್ನು ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡವು ಮೂರು ಬಾರಿ ಪಂದ್ಯ ಆಡುವ ಸಾಧ್ಯತೆಗಳಿವೆ. ಲೀಗ್ ಸುತ್ತಿನಲ್ಲಿ, ಸೂಪರ್-4 ಸುತ್ತಿನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಗಳಿಸಿದಲ್ಲಿ ಫೈನಲ್ನಲ್ಲಿ ಮತ್ತೆ ಸೆಣಸಾಡಲಿವೆ. ಆದರೆ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ.