ರಾಜ್ಕೋಟ್, ಜ 07( DaijiworldNews/SM): ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 91 ರನ್ ಗಳಿಂದ ಗೆಲುವಿನ ಸಾಧಿಸಿದೆ. ಆ ಮೂಲಕ ಸರಣಿಯನ್ನು ಕೈವಶ ಮಾಡಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಪೇರಿಸಿದ್ದು ಶ್ರೀಲಂಕಾಕ್ಕೆ 229 ರನ್ಗಳ ಬೃಹತ್ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 137 ರನ್ ಗಳಿಗೆ ಆಲೌಟ್ ಆಗಿದ್ದು 91 ರನ್ ಗಳಿಂದ ಸೋಲು ಕಂಡಿದೆ. ಲಂಕಾ ಪರ ಪಾಥುಮ್ ನಿಸಂಕಾ 15, ಕೌಶಲ್ ಮೆಂಡಿಸ್ 23, ಧನಂಜಯ್ ಡಿಸಿಲ್ವಾ 22, ಅಸಲಂಕಾ 19 ಮತ್ತು ದಸುನ್ ಶಂನಕಾ 23 ರನ್ ಪೇರಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ಅರ್ಷದೀಪ್ ಸಿಂಗ್ 3, ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್ ಮತ್ತು ಯುಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದಿದ್ದಾರೆ.
ಸೂರ್ಯಕುಮಾರ್ ಯಾದವ್ ಭಾರತದ ಪರ ಗರಿಷ್ಠ 112 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಶಾನ್ ಕಿಶನ್ ಮೊದಲ ಓವರ್ ನಲ್ಲೇ ಪೆವಿಲಿಯನ್ ಗೆ ಮರಳಿದರು. ಇದಾದ ಬಳಿಕ ಕ್ರೀಸ್ ಗೆ ಬಂದ ರಾಹುಲ್ ತ್ರಿಪಾಠಿ ಅವಸರದಲ್ಲಿ 35 ರನ್ ಗಳಿಸಿದರು. ಇದರಿಂದಾಗಿ ಭಾರತ ಪವರ್ಪ್ಲೇಯಲ್ಲಿ ಎರಡು ವಿಕೆಟ್ ಕಳೆದುಕೊಂಡರೂ 53 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.