ಮುಂಬೈ, ಜ 08 (DaijiworldNews/DB): ಶ್ರೀಲಂಕಾ ವಿರುದ್ದ ನಿನ್ನೆ ನಡೆದ ಕೊನೆಯ ಟಿ 20 ಪಂದ್ಯದಲ್ಲಿ ಭಾರತ ತಂಡ 91 ರನ್ಗಳಿಂದ ಗೆದ್ದು ಬೀಗಿತ್ತು. ಪಂದ್ಯದಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸೂರ್ಯಕುಮಾರ್ ಯಾದವ್ ಅವರಿಗೆ ಕೆ.ಎಲ್. ರಾಹುಲ್ ತುಳುವಿನಲ್ಲೇ ಅಭಿನಂದಿಸಿದ್ದಾರೆ. ಇನ್ನು ಈ ಅಭಿನಂದನೆಗೆ ಯಾದವ್ ಪತ್ನಿ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು, ಇಬ್ಬರ ತುಳು ಸಂಭಾಷಣೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ವಿಶ್ರಾಂತಿಯಲ್ಲಿರುವ ಮಂಗಳೂರು ಮೂಲದ ಕೆ.ಎಲ್. ರಾಹುಲ್ ಅವರು ಸೂರ್ಯ ಕುಮಾರ್ ಯಾದವ್ ಅವರ ಅದ್ಬುತ ಬ್ಯಾಟಿಂಗ್ ಪ್ರದರ್ಶನಕ್ಕೆ ತುಳುವಿನಲ್ಲೇ ಶುಭ ಹಾರೈಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿರುವ ಫೋಟೋ ಹಾಕಿ ಪೋಸ್ಟ್ ಮಾಡಿರುವ ಕೆ.ಎಲ್. ರಾಹುಲ್, ’ಬಾರೀ ಎಡ್ಡೆ ಗೊಬ್ಬಿಯಾ’ (ತುಂಬಾ ಚೆನ್ನಾಗಿ ಆಟವಾಡಿದ್ದೀಯಾ) ಎಂದು ಬರೆದುಕೊಂಡಿದ್ದರು.
ಇನ್ನು ಇದೇ ಇನ್ಸ್ಟಾಗ್ರಾಂ ಸ್ಟೋರಿಯ ಸ್ಕ್ರೀನ್ಶಾಟ್ನ್ನು ತೆಗೆದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿರುವ ಸೂರ್ಯಕುಮಾರ್ ಯಾದವ್ ಅವರ ಪತ್ನಿ, ಮೂಲತಃ ಮಂಗಳೂರಿನವರಾದ ದೇವಿಶಾ ಶೆಟ್ಟಿ, ’ಚೂರು ತುಳು ಕಲ್ಪಾವೊಡ್ ಆರೆಗ್ ನನ’ (ಅವರಿಗಿನ್ನು ಸ್ವಲ್ಪ ತುಳು ಕಲಿಸಬೇಕು) ಎಂದು ಬರೆದಿದ್ದರು. ಈ ಎರಡೂ ಸ್ಟೋರಿಗಳು ತುಳುವರ ಮನಸು ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.