ನವದೆಹಲಿ, ಜ 14 (DaijiworldNews/DB): ಟೆನಿಸ್ಗೆ ವಿದಾಯ ಘೋಷಿಸಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಇದೀಗ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ನಿವೃತ್ತಿ ನಂತರ ಮಗನೊಂದಿಗೆ ಹೆಚ್ಚಿನ ಸಮಯ ಕಳೆಯುವುದಾಗಿ ಹೇಳಿಕೊಂಡಿದ್ದಾರೆ.
ಫೆಬ್ರವರಿ 19ರಂದು ಆರಂಭವಾಗುವ ಡಬ್ಲ್ಯೂಟಿಎ 1000 ದುಬೈ ಟೆನಿಸ್ ಚಾಂಪಿಯನ್ಶಿಪ್ ಬಳಿಕ ಸಾನಿಯಾ ಪೂರ್ಣ ಪ್ರಮಾಣದಲ್ಲಿ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಲಾಗಿದೆ. ಆದರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಜನವರಿ 16ರಂದು ನಡೆಯುವ ಆಸ್ಟ್ರೇಲಿಯನ್ ಓಪನ್ ತಮ್ಮ ಕೊನೆಯ ಪಂದ್ಯ ಅವರ ವೃತ್ತಿ ಜೀವನದ ಕೊನೆಯ ಗ್ರಾಂಡ್ ಸ್ಲಾಂ ಟೂರ್ನಿ ಎಂಬುದಾಗಿ ಸ್ವತಃ ಸಾನಿಯಾ ಪ್ರಕಟಿಸಿದ್ದಾರೆ. ಈ ಪಂದ್ಯದ ಬಳಿಕ ಮಗನೊಂದಿಗೇ ಹೆಚ್ಚಿನ ಸಮಯ ಕಳೆಯುವುದಾಗಿ ಮೂಗುತಿ ಸುಂದರಿ ಹೇಳಿದ್ದಾರೆ.
ಇನ್ನು ತಮ್ಮ ವೃತ್ತಿ ಜೀವನದ ಆರಂಭದಿಂದ ಇಲ್ಲಿವರೆಗಿನ ಭಾವುಕ ಕ್ಷಣಗಳನ್ನು ಪತ್ರ ಮುಖೇನ ಹಿಡಿದಿಟ್ಟಿರುವ ಸಾನಿಯಾ, ಅದನ್ನು ಟ್ವೀಟ್ ಮಾಡಿ ಕ್ರೀಡಾಭಿಮಾನಿಗಳೊಂದಿಗೂ ಹಂಚಿಕೊಂಡಿದ್ದಾರೆ.
ಹೈದರಾಬಾದ್ನ ಆರು ವರ್ಷದ ಬಾಲಕಿ 30 ವರ್ಷದ ಹಿಂದೆ ಮೊದಲ ಬಾರಿಗೆ ತನ್ನ ತಾಯಿಯ ಜೊತೆ ಟೆನಿಸ್ ಕೋರ್ಟ್ಗೆ ಹೋದಾಗ ಅಲ್ಲಿದ್ದ ಕೋಚ್ ಟೆನಿಸ್ ಆಡುವ ಕಲೆಯನ್ನು ಹೇಳಿಕೊಟ್ಟಿದ್ದರು. ಟೆನಿಸ್ ಆಡಲು ನಾನು ಚಿಕ್ಕವಳೆಂದೇ ಆ ಕ್ಷಣದಲ್ಲಿ ಭಾವಿಸಿದ್ದೆ. ಆದರೆ ಆರನೇ ವರ್ಷದಲ್ಲೇ ನನ್ನ ಕನಸುಗಳು ಪ್ರಾರಂಭವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಅಲ್ಲಿಂದ ಶುರುವಾದ ಟೆನಿಸ್ ಪ್ರೀತಿ ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. ಒಳ್ಳೆಯ ಮತ್ತು ಕೆಟ್ಟ ಕ್ಷಣಗಳೆರಡನ್ನೂ ಅನುಭವಿಸಿದ್ದೇನೆ. ಎರಡೂ ಕ್ಷಣಗಳಲ್ಲಿಯೂ ಜೊತೆಗಿದ್ದ ಪೋಷಕರು, ಸಹೋದರಿ, ಕುಟುಂಬ, ಕೋಚ್, ಫಿಸಿಯೋ ಮತ್ತು ತಂಡದ ಬೆಂಬಲದಿಂದ ನಾನು ಇಷ್ಟೆತ್ತರಕ್ಕೆ ಬೆಳೆದಿದ್ದೇನೆ. ಜೀವನದ ಕಷ್ಟದ ಸಮಯದಲ್ಲಿ ಜೊತೆಗೆ ನಿಂತ ಎಲ್ಲರಿಗೂ ಅಭಾರಿ. ಹೈದರಾಬಾದ್ನ ಈ ಪುಟ್ಟ ಹುಡಗಿಯ ಕನಸು ನನಸಿಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ಎಂದು ಸಾನಿಯಾ ಭಾವುಕರಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
2005ರಲ್ಲಿ ಆಸ್ಟ್ರೇಲಿಯನ್ ಓಪನ್ನೊಂದಿಗೆ ನನ್ನ ಗ್ರಾಂಡ್ ಸ್ಲಾಮ್ ಜರ್ನಿ ಆರಂಭವಾಯಿತು. ಅದೇ ಗ್ರಾಂಡ್ಸ್ಲಾಮ್ನೊಂದಿಗೆ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ನನ್ನ ಮಗನಿಗೆ ನಾನೀಗ ಹೆಚ್ಚು ಬೇಕಾಗಿದೆ. ಅವನಿಗಾಗಿ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.