ತಿರುವಂತಪುರಂ, ಜ 15 (DaijiworldNews/SM): ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಕಮಾಲ್ ನಡೆದಿದೆ. ಸ್ಪೋಟಕ ಬ್ಯಾಟಿಂಗ್ ಒಂದೆಡೆಯಾದ್ರೆ ಮಾರಕ ಬೌಲಿಂಗ್ ಲಂಕಾ ಪಡೆಗೆ ದಿಗಿಲು ತಂದಿದೆ.
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದು 46ನೇ ಶತಕ ಸಿಡಿಸಿದ್ದಾರೆ. ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಕೊಹ್ಲಿ ಶ್ರೀಲಂಕಾ ಬೌಲರ್ ಗಳನ್ನು ಮನಬಂದಂತೆ ಚಚ್ಚಿದ್ದಾರೆ. 110 ಎಸೆತಗಳಲ್ಲಿ ಕೊಹ್ಲಿ ಅಜೇಯ 166 ರನ್ ಗಳನ್ನು ಸಿಡಿಸಿದ್ದಾರೆ.
ಈ ವೇಳೆ ಇನ್ನಿಂಗ್ಸ್ನಲ್ಲಿ ಕೊಹ್ಲಿ 13 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದರು. ಇದು ಕೊಹ್ಲಿ ಅವರ ಏಕದಿನ ವೃತ್ತಿ ಬದುಕಿನ 46ನೇ ಶತಕವಾಗಿದೆ. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಅವರು ಕೇವಲ ನಾಲ್ಕು ಹೆಜ್ಜೆ ದೂರದಲ್ಲಿದ್ದಾರೆ.
ವಿರಾಟ್ ತಮ್ಮ 46ನೇ ಶತಕದಿಂದಾಗಿ ಸಚಿನ್ ಅವರ ಎರಡು ದೊಡ್ಡ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಒಂದು ತಂಡದ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು(10) ಮತ್ತು ತವರಿನಲ್ಲಿ(21) ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಕೊಹ್ಲಿ ಸಚಿನ್ ಅವರನ್ನು ಮೀರಿಸಿದ್ದಾರೆ.
ಕೊಹ್ಲಿ ಮತ್ತು ಸಚಿನ್ ತಮ್ಮ 46ನೇ ಏಕದಿನ ಶತಕದ ಇನ್ನಿಂಗ್ಸ್ನಲ್ಲಿ 150ಕ್ಕಿಂತ ಹೆಚ್ಚು ವೈಯಕ್ತಿಕ ರನ್ ಗಳಿಸಿದ್ದಾರೆ. ಅಲ್ಲದೆ ಇಬ್ಬರೂ ಬ್ಯಾಟ್ಸ್ ಮನ್ ಗಳು ಅಜೇಯವಾಗಿ ಪೆವಿಲಿಯನ್ ಗೆ ಮರಳಿರುವುದು ವಿಶೇಷ. ಫೆಬ್ರವರಿ 2010ರ ಫೆಬ್ರವರಿಯಲ್ಲಿ ಸಚಿನ್ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ಮೈದಾನದಲ್ಲಿ ತಮ್ಮ 46ನೇ ಶತಕವನ್ನು ಗಳಿಸಿದರು. ಸಚಿನ್ 147 ಎಸೆತಗಳಲ್ಲಿ 25 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ ಅಜೇಯ 200 ರನ್ ಪೇರಿಸಿದ್ದರು. ಇನ್ನು ಪುರುಷರ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಸಚಿನ್ ಪಾತ್ರರಾಗಿದ್ದಾರೆ.