ತಿರುವನಂತಪುರಂ, ಜ 16 (DaijiworldNews/DB): ಶ್ರೀಲಂಕಾ ವಿರುದ್ದದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ ಕೊಹ್ಲಿಯೆಡೆಗೆ ಓಡಿ ಬಂದು ಕಾಲಿಗೆ ನಮಸ್ಕರಿಸಲು ಯತ್ನಿಸಿ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಯುವಕನ ಅತ್ಯುತ್ಸಾಹಕ್ಕೆ ನಿರಾಸೆಯುಂಟು ಮಾಡದೇ ಕೊಹ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಭಾನುವಾರ ತಿರುವನಂತಪುರಂನಲ್ಲಿ ಕೊಹ್ಲಿ 166 ರನ್ ಬಾರಿಸಿ ಅಭಿಮಾನಿಗಳ ಹೃದಯದಲ್ಲಿ ಇನ್ನಷ್ಟು ಎತ್ತರದ ಸ್ಥಾನ ಪಡೆದರು. ಆದರೆ ಅಭಿಮಾನಿಯೊಬ್ಬ ಕೊಹ್ಲಿಯೊಡನೆ ಫೋಟೋ ತೆಗೆಸಿಕೊಳ್ಳಬೇಕೆಂದು ಸೀದಾ ಮೈದಾನಕ್ಕೇ ಓಡಿ ಬಂದಿದ್ದಾನೆ. ಕೊಹ್ಲಿಯೆಡೆಗೆ ಓಡಿ ಬಂದ ಯುವಕ ಕೊಹ್ಲಿ ಪಾದಕ್ಕೆರಗಿ ನಮಸ್ಕರಿಸಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಹಿಂದೆ ಸರಿದ ಕೊಹ್ಲಿ ಆತನನ್ನು ಪ್ರೀತಿಯಿಂದ ತನ್ನೆಡೆಗೆ ಬರಮಾಡಿಕೊಂಡು ಆತನ ಇಚ್ಚೆಯಂತೆ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಿದ್ದಾರೆ.
ಇನ್ನು ಕೊಹ್ಲಿಯ ಅಭಿಮಾನಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ನೋಡಿದ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಾನೇ ಮುಂದೆ ಹೋಗಿ ಆ ಯುವಕನಿಂದ ಮೊಬೈಲ್ ಪಡೆದುಕೊಂಡು ಕೊಹ್ಲಿಯೊಂದಿಗೆ ಆತನ ಫೋಟೋ ಕ್ಲಿಕ್ಕಿಸಿದ್ದಾರೆ. ಆ ಮೂಲಕ ಕೊಹ್ಲಿ ಅಭಿಮಾನಿ ಯುವಕನ ಮೊಬೈಲ್ನಲ್ಲಿ ಸುಂದರ ಕ್ಷಣವೊಂದು ಸೆರೆಯಾದಂತಾಗಿದೆ. ಸೂರ್ಯಕುಮಾರ್ ಯಾದವ್ ಅವರೂ ಕೂಡಾ ತಮ್ಮ ಸರಳತೆಯೊಂದಿಗೆ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.