ದುಬೈ, ಜ 17 (DaijiworldNews/DB): ಏಷ್ಯಾ ಕಪ್ 2023ರ ಬಗ್ಗೆ ಚರ್ಚಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜೀಮ್ ಸೇಥಿ ಅವರು ಎಸಿಸಿ ಅಧ್ಯಕ್ಷ ಜಯ್ ಶಾ ಅವರ ಭೇಟಿಗೆ ಮುಂದಾಗಿದ್ದಾರೆ. ಫೆಬ್ರವರಿಯಲ್ಲಿ ಈ ಭೇಟಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
2023 ಏಷ್ಯಾಕಪ್ ನ ಆತಿಥ್ಯವನ್ನು ಪಾಕಿಸ್ತಾನ ವಹಿಸಲಿದ್ದು, ಪಾಕ್ ನೆಲದಲ್ಲೇ ಪಂದ್ಯ ನಡೆಸುವಂತೆ ಸೇಥಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಏಷ್ಯಾಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಜಯ್ ಶಾ ಹೇಳಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಲು ಸೇಥಿ ಅವರು ಜಯ್ ಶಾ ಭೇಟಿ ಮಾಡಲು ಬಯಸಿದ್ದಾರೆ. ದುಬೈಗೆ ಇಂಟರ್ನ್ಯಾಷನಲ್ ಟಿ20 ಲೀಗ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಅವರು ಈ ವಿಚಾರವನ್ನು ಎಸಿಸಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಏಷ್ಯಾಕಪ್ ಪಂದ್ಯಕ್ಕೆ ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸದಿದ್ದರೆ ಅಥವಾ ಆತಿಥ್ಯದ ಹಕ್ಕನ್ನು ಹಿಂತೆಗೆದುಕೊಂಡಲ್ಲಿ 2023ರ ವಿಶ್ವಕಪ್ನಿಂದ ಪಾಕ್ ತಂಡ ಹಿಂದೆ ಸರಿಯಲಿದೆ ಎಂದು ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಕಳೆದ ಡಿಸೆಂಬರ್ನಲ್ಲಿ ಹೇಳಿದ್ದರು. ಆದರೆ ಇದೀಗ ನೂತನ ಅಧ್ಯಕ್ಷ ಸೇಥಿ, ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ಭೇಟಿಗೆ ಜಯ್ ಶಾ ಒಪ್ಪಿಗೆ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.