ಮುಂಬೈ, ಜ 17 ( DaijiworldNews/SM): ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತ ತಂಡದ ಕ್ರಿಕೆಟಿಗ ರಿಷಭ್ ಪಂತ್ ಅಪಘಾತದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆರೋಗ್ಯ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಮುಂದಿನ ಸವಾಲುಗಳನ್ನು ಎದುರಿಸಲು ನಾನು ಸಿದ್ಧನಾಗುತ್ತಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ಟ್ವೀಟ್ ಮೂಲಕ ತಮ್ಮ ಆರೋಗ್ಯದ ಬಗ್ಗೆ ರಿಷಬ್ ಮಾಹಿತಿ ಹಂಚಿಕೊಂಡಿದ್ದಾರೆ. ಅನೇಕ ಅಭಿಮಾನಿಗಳ ಬೆಂಬಲ, ಶುಭ ಹಾರೈಕೆಗಳಿಂದ ಕೃತಜ್ಞನಾಗಿದ್ದೇನೆ. ಅಪಘಾತದ ಕ್ಷಣದಿಂದಲೂ ಅಧ್ಬುತ ರೀತಿಯಲ್ಲಿ ಬೆಂಬಲಿಸುತ್ತಿರುವ ಬಿಸಿಸಿಐ, ಸರ್ಕಾರಕ್ಕೆ ವಂದನೆಗಳು. ವೈದ್ಯರು, ಸಹ ಆಟಗಾರರು, ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಲು ನನ್ನಲ್ಲಿ ಪದಗಳಿಲ್ಲ. ಶೀಘ್ರವೇ ಮೈದಾನದಲ್ಲಿ ನಿಮ್ಮನ್ನು ಭೇಟಿಯಾಗಲು ಹಾತೊರೆಯುತ್ತಿದ್ದೇನೆ ಎಂದಿದ್ದಾರೆ. ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಿಸಲು ತಮಗೆ ನೆರವಾದ ರಜತ್ ಕುಮಾರ್, ನಿಶು ಕುಮಾರ್ಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದು, ಅವರ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಸದ್ಯ ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 6 ವಾರಗಳ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವೈದ್ಯಕೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕ್ರಿಕೆಟ್ ಗೆ ಮರಳಲು ಅವರು ಇನ್ನಷ್ಟು ಸಮಯ ಕಾಯಬೇಕಾಗಬಹುದು ಎನ್ನಲಾಗಿದೆ. ಪಂತ್ ಈ ವರ್ಷದ ಐಪಿಎಲ್, ಏಕದಿನ ವಿಶ್ವಕಪ್ ಮಾತ್ರವಲ್ಲ 2024ರ ಐಪಿಎಲ್ ಹಾಗೂ ಟಿ20 ವಿಶ್ವಕಪ್ ನಲ್ಲಿಯೂ ಆಟವಾಡುವುದು ಅನುಮಾನ ಎನ್ನಲಾಗಿದೆ.