ನವದೆಹಲಿ, ಜ 22 (DaijiworldNews/DB): ಚಲನಚಿತ್ರವಾಗಿ ತೆರೆಯ ಮೇಲೆ ಕಾಣಿಸಲಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರ ಆತ್ಮಕತೆ ರಾವಲ್ಪಿಂಡಿ ಎಕ್ಸ್ಪ್ರೆಸ್ಗೆ ಬ್ರೇಕ್ ಬಿದ್ದಿದೆ. ಚಿತ್ರ ತಂಡದೊಂದಿಗೆ ಸಂಬಂಧ ಕಡಿದುಕೊಂಡಿರುವುದಾಗಿ ಸ್ವತಃ ಶೋಯೆಬ್ ಹೇಳಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ನವೆಂಬರ್ 13ರಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಬಿಡುಗಡೆಯಾಗುವುದರಲ್ಲಿತ್ತು. ಕಳೆದ ಜುಲೈನಲ್ಲಿ ಚಿತ್ರದ ಪ್ರಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿ ಈ ಮಾಹಿತಿಯನ್ನು ಸ್ವತಃ ಶೋಯೆಬ್ ಅವರೇ ನೀಡಿದ್ದರು. ಆದರೆ ಇದೀಗ ಏಕಾಏಕಿ ಚಿತ್ರತಂಡದೊಂದಿಗೆ ಸಂಬಂಧ ಕಡಿದುಕೊಂಡಿರುವುದಾಗಿ ಹೇಳುವ ಮೂಲಕ ಆತ್ಮಕತೆ ಚಲನಚಿತ್ರವಾಗಿ ಬರುವುದಿಲ್ಲ ಎಂಬ ಪರೋಕ್ಷ ಮಾಹಿತಿಯನ್ನು ಶೋಯೆಬ್ ಪ್ರಕಟಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ನನ್ನ ಹೆಸರು, ಬದುಕಿಗೆ ಸಂಬಂಧಿಸಿದ ಯಾವುದೇ ಘಟನಾವಳಿಗಳನ್ನು ಬಳಸಿದಲ್ಲಿ ನಿರ್ಮಾಪಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಕನಸಿನ ಯೋಜನೆ
ಚಿತ್ರ ತಂಡದೊಂದಿಗೆ ಸಂಬಂಧ ಕಡಿದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿರುವ ಅಖ್ತರ್, ಇದು ನಿಜವಾಗಿಯೂ ನನ್ನ ಕನಸಿನ ಯೋಜನೆಯಾಗಿತ್ತು ಎಂದಿದ್ದಾರೆ. ಹಲವು ವಿಚಾರಗಳನ್ನು ನಾನು ನಿರ್ಬಂಧಿಸಲೆತ್ನಿಸಿದರೂ ನನ್ನ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ ಚಿತ್ರ ತಂಡ ಮುಂದುವರಿಯಿತು. ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವುದನ್ನು ಬಿಟ್ಟು ಒಪ್ಪಂದದ ಉಲ್ಲಂಘನೆಯೇ ಹೆಚ್ಚಾಯಿತು. ಹೀಗಾಗಿ ಅವರೊಂದಿಗೆ ಸಂಬಂಧ ಕಡಿದುಕೊಳ್ಳಬೇಕಾಯಿತು ಎಂದು ಬರೆದುಕೊಂಡಿದ್ದಾರೆ. ಮುಹಮ್ಮದ್ ಫರಾಜ್ ಕೈಸರ್ ನಿರ್ದೇಶಕರಾಗಿದ್ದರು. ಇನ್ನು ತನ್ನ ಬಯೋಪಿಕ್ನಲ್ಲಿ ಸಲ್ಮಾನ್ ಖಾನ್ ನಟಿಸಬೇಕೆಂದು ಶೋಯೆಬ್ ಅಖ್ತರ್ ಹೇಳಿಕೊಂಡಿದ್ದರು.