ಮುಂಬೈ, ಜ 24 (DaijiworldNews/DB): ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಟೀಂ ಇಂಡಿಯಾದ ಯಂಗ್ ಓಪನರ್ ಶುಭಮನ್ ಗಿಲ್ಗೆ ಹೊಸ ಹೆಸರಿಟ್ಟಿದ್ದಾರೆ. ಗಿಲ್ಗೆ ಸ್ಮೂತ್ಮ್ಯಾನ್ ಗಿಲ್ ಎಂದು ಅಡ್ಡ ಹೆಸರಿಟ್ಟಿದ್ದೇನೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.
ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ವಿರುದ್ದ ಉತ್ತಮ ಪ್ರದರ್ಶನ ತೋರಿದ್ದ ಗಿಲ್, ಕಿವೀಸ್ ವಿರುದ್ದ ದ್ವಿಶತಕ ಸಿಡಿಸಿದ್ದರು. 2ನೇ ಪಂದ್ಯದಲ್ಲಿ ಅವರ ಆಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ತಂಡ ಗೆಲ್ಲುವವರೆಗೂ ಕ್ರೀಸ್ನಲ್ಲಿದ್ದು, ತಂಡಕ್ಕೆ ಹುರುಪು ತುಂಬಿದ್ದರು. ಇದಕ್ಕಾಗಿ ಗಿಲ್ಗೆ ಸ್ಮೂತ್ ಮ್ಯಾನ್ ಗಿಲ್ ಎಂದು ಸುನಿಲ್ ಗವಾಸ್ಕರ್ ಹೊಸ ನಾಮಕರಣ ಮಾಡಿದ್ದಾರೆ.
ಕಿವೀಸ್ ವಿರುದ್ದದ 2ನೇ ಏಕದಿನ ಬಳಿಕ ಗಿಲ್ ಜೊತೆಗೆ ಗವಾಸ್ಕರ್ ಸಂಭಾಷಣೆ ನಡೆಸಿದ್ದರು. ಈ ವೇಳೆ ನಾನು ನಿಮಗೆ ಸ್ಮೂತ್ಮ್ಯಾನ್ ಗಿಲ್ ಎಂಬುದಾಗಿ ಅಡ್ಡ ಹೆಸರಿಟ್ಟಿದ್ದೇನೆ. ಇದಕ್ಕೆ ನಿಮ್ಮ ಅಸಮಾಧಾನ ಇಲ್ಲ ಅಲ್ಲವೇ ಎಂದು ಕೇಳಿದ್ದಾರೆ. ಈ ವೇಳೆ ಖಂಡಿತಾ ಅಭ್ಯಂತರ ಇಲ್ಲ ಸರ್ ಎಂಬುದಾಗಿ ಗಿಲ್ ಹೇಳಿದ್ದಾರೆ.