ಇಂದೋರ್, ಜ 24 (DaijiworldNews/DB): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬರೋಬ್ಬರಿ 1100 ದಿನಗಳ ಬಳಿಕ ಅಂದರೆ 3 ವರ್ಷದ ಬಳಿಕ ಏಕದಿನದಲ್ಲಿ ಶತಕ ಸಿಡಿಸಿದ್ದಾರೆ. ಅಲ್ಲದೆ, ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾರ 30ನೇ ಶತಕ ಇದಾಗಿದೆ.
ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ. ಕೇವಲ 85 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 101 ರನ್ ಸಿಡಿಸಿದ್ದಾರೆ. 2020ರ ಜನವರಿ 19ರಂದು ಆಸ್ಟ್ರೇಲಿಯಾ ವಿರುದ್ದ ಏಕದಿನ ಶತಕ ಸಿಡಿಸಿದ್ದ ಅವರು ಮೂರು ವರ್ಷಗಳ ನಂತರ ಇಂದು ಶತಕ ಬಾರಿಸಿದರು. ಟಿ20ಯಲ್ಲಿಯೂ ರೋಹಿತ್ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು.
ಕಳೆದ ಮೂರು ವರ್ಷಗಳಿಂದ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದ ರೋಹಿತ್ರನ್ನು ಏಕದಿನ ತಂಡದಿಂದ ಕೈಬಿಡಬೇಕೆಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಟೀಕೆ ಮಾಡಿದವರಿಗೆ ಶತಕದ ಮೂಲಕ ರೋಹಿತ್ ಉತ್ತರಿಸಿದ್ದಾರೆ.
9 ದಿನ, 3 ಶತಕ-ಶುಭಮನ್ ಗಿಲ್ ಸಾಧನೆ
ಇನ್ನು ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡಾ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕೇವಲ 9 ದಿನಗಳ ಅಂತರದಲ್ಲಿ 3 ಶತಕ ಬಾರಿಸಿ ಗಿಲ್ ಸಾಧನೆ ಮಾಡಿದ್ದಾರೆ.
ಇಂದೋರ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿಯೂ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಆ ಮೂಲಕ ತಮ್ಮ ಏಕದಿನ ವೃತ್ತಿ ಜೀವನದಲ್ಲಿ ಒಟ್ಟು ನಾಲ್ಕು ಶತಕ ಬಾರಿಸಿರುವ ಗಿಲ್ ಬ್ಯಾಟಿಂಗ್ಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ.
ಮೊದಲು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 208 ರನ್ ಮೂಲಕ ದ್ವಿ ಶತಕ ಗಿಲ್, ಅದಕ್ಕೂ ಮುನ್ನ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 116 ರನ್ ಗಳಿಸಿದ್ದರು. ಇದೀಗ ಇಂದಿನ ಪಂದ್ಯದಲ್ಲಿ 112 ರನ್ ಪೇರಿಸಿದರು. 78 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು.