ನವದೆಹಲಿ, ಜ 26 (DaijiworldNews/DB): ಆರಂಭಿಕ ವನಿತಾ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿರುವ 5 ಫ್ರಾಂಚೈಸಿಗಳು ಒಟ್ಟು 4,669 ಕೋಟಿ ರೂ. ಮೊತ್ತಕ್ಕೆ ಹರಾಜಾಗಿವೆ.
ಈ ಬಗ್ಗೆ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದು, ಭರ್ಜರಿ ಮೊತ್ತಕ್ಕೆ ಐದು ತಂಡಗಳು ಹರಾಜಾಗಿವೆ. ಹರಾಜಿನ ಒಟ್ಟು ಮೊತ್ತ ಒಟ್ಟು 4,669 ಕೋಟಿ ರೂ.ಗಳು ಎಂದು ತಿಳಿಸಿದ್ದಾರೆ.
ವಿಶೇಷವೆಂದರೆ ಇಷ್ಟು ಮೊತ್ತಕ್ಕೆ ತಂಡಗಳು ಹರಾಜಾಗಿರುವುದು ಹೊಸ ಮೈಲಿಗಲ್ಲಾಗಿದೆ. 2008ರಲ್ಲಿ ನಡೆದ ಪುರುಷರ ಐಪಿಎಲ್ ಫ್ರಾಂಚೈಸಿಗಳ ಬಿಡ್ ಮೊತ್ತ ಇದಕ್ಕಿಂತ ಕಡಿಮೆಯಿತ್ತು. ಆ ತಂಡಗಳು ಒಟ್ಟು 723.59 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದ್ದವು ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ವಿಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜಿನಲ್ಲಿ ದಾಖಲೆ ಸ್ಥಾಪಿಸಿದೆ. ಅಹ್ಮದಾಬಾದ್, ಮುಂಬಯಿ, ಬೆಂಗಳೂರು, ದೆಹಲಿ ಮತ್ತು ಲಕ್ನೋ ನಗರಗಳನ್ನು ಈ ಐದು ಫ್ರಾಂಚೈಸಿಗಳು ಪ್ರತಿನಿಧಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಅಹ್ಮದಾಬಾದ್ ಮೂಲದ ತಂಡ 1,289 ಕೋಟಿ ರೂ. ದಾಖಲೆ ಮೊತ್ತಕ್ಕೆ ಅದಾನಿ ನ್ಪೋರ್ಟ್ಲೈನ್ ಪ್ರೈವೇಟ್ ಲಿಮಿಟೆಡ್ ಪಾಲಾಯಿತು. ಮುಂಬಯಿ ಫ್ರಾಂಚೈಸಿಯನ್ನು ಇಂಡಿಯಾವಿನ್ ನ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ 912.99 ಕೋಟಿ ರೂ.ಗೆ ಖರೀದಿಸುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.
ಬೆಂಗಳೂರು ತಂಡವನ್ನು ರಾಯಲ್ ಚಾಲೆಂಜರ್ ನ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ತಂಡವು 901 ಕೋಟಿ ರೂ.ಗಳಿಗೆ ಖರೀದಿಸಿದೆ. ದೆಹಲಿ ಫ್ರಾಂಚೈಸಿಯನ್ನು 810 ಕೋಟಿ ರೂ.ಗೆ ಜೆಎಸ್ಡಬ್ಲ್ಯು ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಲಕ್ನೋ ಫ್ರಾಂಚೈಸಿಯನ್ನು 757 ಕೋಟಿ ರೂ.ಗಳಿಗೆ ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಖರೀದಿ ಮಾಡಿವೆ.
951 ಕೋಟಿ ರೂ.ಗಳಿಗೆ ವಯಾಕಾಮ್ 18ಗೆ ಪಂದ್ಯದ ನೇರಪ್ರಸಾರದ ಹಕ್ಕು ನೀಡಲಾಗಿದೆ. ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಬಿಸಿಸಿಐ 5650.99 ಕೋಟಿ ರೂ. ಗಳಿಸಿದೆ. ಆ ಮೂಲಕ ಐಪಿಎಲ್ ಬಳಿಕ ವಿಶ್ವದ ಟಿ20 ಲೀಗ್ಗಳ ಪೈಕಿ 2ನೇ ಶ್ರೀಮಂತ ಪಂದ್ಯವಾಗಿ ಮಹಿಳಾ ಲೀಗ್ ಹೊರ ಹೊಮ್ಮಿದೆ.